ನವದೆಹಲಿ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಅವರ ಜೀವ ಮತ್ತು ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅವರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಸುಧಾಂಶು ಧುಲಿಯಾ ಅವರು ಇದ್ದ ರಜಾಕಾಲದ ನ್ಯಾಯಪೀಠ, ಈ ಕುರಿತ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿತು.
ಡಲ್ಲೇವಾಲ್ ಅವರಿಗೆ ವೈದ್ಯಕೀಯ ನೆರವು ನೀಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದಂತೆ ಕ್ರಮ ಕೈಗೊಂಡಿಲ್ಲ ಎಂದು ದೂರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಈ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ, ಪಂಜಾಬ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಪೀಠವು, ಕ್ರಮ ಕೈಗೊಂಡ ಕುರಿತು ಶನಿವಾರ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತು.
'ಒಬ್ಬ ವ್ಯಕ್ತಿಯ ಜೀವ ಅಪಾಯದಲ್ಲಿದ್ದು, ನೀವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅವರಿಗೆ (ಡಲ್ಲೇವಾಲ್) ವೈದ್ಯಕೀಯ ನೆರವು ನೀಡಲೇಬೇಕು. ಆದರೆ, ನೀವು ನ್ಯಾಯಾಲಯದ ಸೂಚನೆ ಪಾಲನೆ ಮಾಡುತ್ತಿಲ್ಲ ಎಂಬ ಭಾವನೆ ಮೂಡಿದೆ' ಎಂದು ಪೀಠ ಹೇಳಿತು.
'ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂಬ ಪರಿಸ್ಥಿತಿ ಇದ್ದಲ್ಲಿ, ಕಠಿಣ ಕ್ರಮ ಕೈಗೊಳ್ಳಬೇಕು' ಎಂದೂ ಸೂಚಿಸಿತು.




.jpg)
