HEALTH TIPS

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಿಕ್ಕಿರಿದ ವಿದ್ಯಾರ್ಥಿ ಪಡೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯದ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದು ಒಂದೆಡೆಯಾದರೆ, ಜಿಲ್ಲೆಯ ವಿವಿಧ ಭಾಗಗಳ ಶಾಲಾ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ತುಂಬಿ ತುಳುಕಿದ್ದರು. ಸಮ್ಮೇಳನದ ಭಾಗವಾಗಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನ ಮಳಿಗೆಗಳು ವಿದ್ಯಾರ್ಥಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದ್ದವು.

ಶಾಲಾ ಬಸ್‌ಗಳು ಮತ್ತು ಸರ್ಕಾರಿ ಬಸ್‌ಗಳಲ್ಲಿ ಸಮ್ಮೇಳನದ ಬಯಲಿಗೆ ಬಂದಿಳಿದ ವಿದ್ಯಾರ್ಥಿಗಳು ಪ್ರದರ್ಶನ ಮಳಿಗೆಗಳು ಇದ್ದ ಆವರಣದ ಎದುರು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ವಿವಿಧ ಇಲಾಖೆಗಳ ವಸ್ತುಪ್ರದರ್ಶನದ ಮಳಿಗೆಗಳತ್ತ ನಡೆದ ವಿದ್ಯಾರ್ಥಿಗಳು, ಅಲ್ಲಿದ್ದ ಪ್ರದರ್ಶನಗಳ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ಕೈಮಗ್ಗ ನಿಗಮದ ಮಳಿಗೆಯಲ್ಲಿ ಪ್ರದರ್ಶಿಸಿದ್ದ ಕೈಮಗ್ಗದ ಯಂತ್ರವನ್ನು ನೋಡಿದ ಕೆಲ ವಿದ್ಯಾರ್ಥಿನಿಯರ ಸಂಭಾಷಣೆ ಹೀಗೆ ಸಾಗಿತ್ತು. ಒಬ್ಬ ವಿದ್ಯಾರ್ಥಿನಿ, 'ಇದು ನನಗೆ ಚೆನ್ನಾಗಿ ಗೊತ್ತಿದೆ. ಇದನ್ನು ಹೈನುಗಾರಿಕೆ ಎನ್ನುತ್ತಾರೆ' ಎಂದಳು. ಮತ್ತೆ ಆಕೆಯೇ ಏನೋ ಅನುಮಾನದಲ್ಲಿ ನೋಡುತ್ತಾ, 'ಇಲ್ಲ, ಇದಕ್ಕೆ ಬೇರೆ ಹೆಸರು' ಎಂದಳು.

ಆಕೆಯ ಗೆಳತಿ, 'ಏ ಹೈನುಗಾರಿಕೆ ಅಂದರೆ ಹಸು ಸಾಕೋದು. ಇದಕ್ಕೆ ಬೇರೆ ಏನೋ ಅಂತಾರೆ' ಎಂದು ಸರಿಪಡಿಸಿದಳು. ಮೊದಲು ಮಾತನಾಡಿದ್ದ ವಿದ್ಯಾರ್ಥಿನಿ, 'ಇದು ನೇಯ್ಗೆ ಮಾಡೋದು. ನೇಕಾರಿಕೆ ಅಂತಾರೆ' ಎಂದು ಸರಿಪಡಿಸಿಕೊಂಡಳು. ಪ್ರತಿ ಮಳಿಗೆಗಳ ಬಳಿಯೂ ಇಂಥದ್ದೇ ಚರ್ಚೆಗಳು ತುಂಬಿದ್ದವು.

ಇಂಧನ ಇಲಾಖೆ ಪ್ರದರ್ಶಿಸಿದ್ದ ಪವನ ವಿದ್ಯುತ್ ಯಂತ್ರಗಳ ರೋಟರ್‌ಗಳು ಮತ್ತು ಸೌರವಿದ್ಯುತ್ ಫಲಕಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ನೋಡಿದರು. ಅವು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಸೂರ್ಯನ ಶಾಖವು ವಿದ್ಯುತ್‌ ಆಗಿ ಹೇಗೆ ಬದಲಾಗುತ್ತದೆ ಮತ್ತು ಪವನ ಯಂತ್ರಗಳಲ್ಲಿನ ಡೈನಮೊಗಳು ಹೇಗೆ ವಿದ್ಯುತ್ ಉತ್ಪಾದಿಸುತ್ತವೆ ಎಂಬುದನ್ನು ಸಿಬ್ಬಂದಿ ವಿವರಿಸಿದರು.

ಸಮ್ಮೇಳನದ ಆವರಣಗಳಲ್ಲಿ ಸ್ಥಾಪಿಸಲಾಗಿರುವ ನೀರು ಶುದ್ಧೀಕರಣದ ಘಟಕಗಳ ಸುತ್ತ ನೆರೆದಿದ್ದ ವಿದ್ಯಾರ್ಥಿಗಳು, ಅವು ಹೇಗೆ ಕೆಲಸ ಮಾಡುತ್ತವೆ ಎಂದು ಸಿಬ್ಬಂದಿಯಲ್ಲಿ ಪ್ರಶ್ನಿಸುತ್ತಿದ್ದರು. ಬೃಹತ್ ಫಿಲ್ಟರ್‌ ಮತ್ತು ಟ್ಯಾಂಕ್‌ಗಳನ್ನು ತೋರಿಸಿದ ಸಿಬ್ಬಂದಿ, ಅವುಗಳ ಕಾರ್ಯವಿಧಾನವನ್ನು ವಿವರಿಸುತ್ತಿದ್ದರು.

ಪ್ರಾಚೀನ ಲಿಪಿ ಸಂಭ್ರಮ

ಬೆಂಗಳೂರಿನ ಮಿಥಿಕ್‌ ಸೊಸೈಟಿಯ ಮಳಿಗೆಯಲ್ಲಿ ಕನ್ನಡದ ಲಿಪಿ ಬೆಳೆದುಬಂದ ಬಗೆಯನ್ನು ವಿವರಿಸುವ ವಿಡಿಯೊಗಳನ್ನು ಬಿತ್ತರಿಸಲಾಗಿತ್ತು. ಜತೆಗೆ 10ನೇ ಶತಮಾನ 15ನೇ ಶತಮಾನದಲ್ಲಿ ಈಗಿನವರ ಹೆಸರನ್ನು ಬರೆದರೆ ಹೇಗಿರುತ್ತದೆ ಎಂಬುದನ್ನು ತೋರಿಸುವ ಪ್ರಾತಕ್ಷಿಕೆ ನೀಡುತ್ತಿದ್ದರು. ವಿದ್ಯಾರ್ಥಿಗಳಂತೂ ತಮ್ಮ ಹೆಸರನ್ನು ಹತ್ತಾರು ಶತಮಾನಗಳ ಹಿಂದಿನ ಲಿಪಿಯಲ್ಲಿ ಹೇಗೆ ಬರೆಯಬಹುದು ಎಂಬುದನ್ನು ತಿಳಿದುಕೊಂಡು ಪುಳಕಿತರಾದರು.

'ಮಿಥಿಕ್‌ ಸೊಸೈಟಿಯ ಅಕ್ಷರ ಭಂಡಾರ ಪೋರ್ಟಲ್‌ನಲ್ಲಿ ಈ ಬಗ್ಗೆ ಮಾಹಿತಿ ಇದೆ. ಮಳಿಗೆಯಲ್ಲಿ ಪೋರ್ಟಲ್‌ ಬಳಸಲು ಅವಕಾಶವಿದೆ. ಬೆಂಗಳೂರು ವ್ಯಾಪ್ತಿಯ 700ಕ್ಕೂ ಹೆಚ್ಚು ಶಾಸನಗಳ ಡಿಜಿಟಲ್‌ ಪ್ರತಿ ಈ ಪೋರ್ಟಲ್‌ನಲ್ಲಿದೆ. ಅವುಗಳಲ್ಲಿನ ಲಿಪಿಗಳ ಕುರಿತ ವಿವರವೂ ಇದೆ' ಎಂದು ಸಿಬ್ಬಂದಿ ಅನುಷಾ ಮೋರ್ಚಿಂಗ್‌ ವಿವರಿಸಿದರು.

ಮಳಿಗೆಯಲ್ಲಿನ ಪರದೆಗಳ ಮೇಲೆ ಹಳೆಯ ಶಾಸನಗಳ ಆಯ್ದ ಭಾಗಗಳನ್ನು ಬಿತ್ತರಿಸಲಾಗುತ್ತಿತ್ತು. ಅಲ್ಲಿರುವ ಪದಗಳು ಯಾವುವು ಎಂದು ಸರಿಯಾಗಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ಚಾಕೋಲೆಟ್‌ ಅನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಹಳೆಗನ್ನಡದ ಲಿಪಿಗಳನ್ನು ಓದಲು ವಿದ್ಯಾರ್ಥಿಗಳು ನಾಮುಂದು ತಾಮುಂದು ಎಂದು ನಿಂತಿದ್ದರು.

'ಎಲ್ಲವೂ ಚೆನ್ನಾಗಿದೆ'

'ನಾನು ಚಿಕ್ಕಮಗಳೂರಿನವನು. ನಾಗಮಂಗಲದಲ್ಲಿ ಓದುತ್ತಿದ್ದೇನೆ. ಸಮ್ಮೇಳನ ನೋಡಲೆಂದೇ ಬಂದೆವು. ಮಂಡ್ಯದಿಂದ ಇಲ್ಲಿಗೆ ಬಸ್‌ ಇರಲಿಲ್ಲ. 8-10 ಕಿ.ಮೀ.ನಡೆದುಕೊಂಡೇ ಬಂದೆವು. ನಮಗೆ ಖುಷಿ ಇದೆ. ಸಮ್ಮೇಳನ ಚೆನ್ನಾಗಿದೆ. ವಸ್ತು ಪ್ರದರ್ಶನ ಚೆನ್ನಾಗಿತ್ತು. ಊಟದ ವ್ಯವಸ್ಥೆ ಇಷ್ಟವಾಯಿತು. ಇಲ್ಲಿ ಹಲವು ಪುಸ್ತಕಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಾವು ದುಡ್ಡು ತಂದಿರಲಿಲ್ಲ. ಹೀಗಾಗಿ ಒಂದೂ ಪುಸ್ತಕ ಕೊಳ್ಳಲಾಗಲಿಲ್ಲ. ನಾಳೆ ಮತ್ತೆ ಬರುತ್ತೇವೆ. ಪುಸ್ತಕ ಕೊಳ್ಳುತ್ತೇವೆ' ಎಂದು ದ್ವಿತೀಯ ಪಿಯು ವಿದ್ಯಾರ್ಥಿ ಅಜಯ್‌ಗೌಡ ಎಚ್‌.ವಿ. ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries