ಕಾಸರಗೋಡು: ರಂಗ ಚಿನ್ನಾರಿ ಅಂಗ ಸಂಸ್ಥೆ 'ಸ್ವರ ಚಿನ್ನಾರಿ' ಆಯೋಜಿಸಿರುವ ರಾಗಾಲಾಪ ಕಾರ್ಯಕ್ರಮ ವಿಶಿಷ್ಟ ಹಾಗೂ ಶ್ಲಾಘನೀಯ ಎಂಬುದಾಗಿ ಖ್ಯಾತ ಪತ್ರಕರ್ತ, ಅಂಕಣಗಾರ ರವೀಂದ್ರ ಜೋಶಿ ಮೈಸೂರು ತಿಳಿಸಿದರು.
ಅವರು ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ರಂಗ ಚಿನ್ನಾರಿ ಕಾಸರಗೋಡಿನ ಅಂಗ ಸಂಸ್ಥೆ ಸ್ವರಚಿನ್ನಾರಿ ವತಿಯಿಂದ ಆಯೋಜಿಸಲಾಗಿದ್ದ ರಾಗ ಸಂಯೋಜನೆ ಕುರಿತಾದ ಒಂದು ದಿನದ ಶಿಬಿರ'ರಾಗಾಲಾಪ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಗಾಲಾಪದಂತಹ ವಿಶಿಷ್ಟ ಕಾರ್ಯಕ್ರಮಗಳಿಂದ ಒಬ್ಬ ಅದ್ಭುತ ಕವಿಯ ಹುಟ್ಟಿಗೆ ಕಾರಣವಾಗಬಹುದು. ಒಬ್ಬ ರಾಗ ಸಂಯೋಜಕನ ಸೃಷ್ಟಿಯಾಗುವುದರ ಜತೆಗೆ ಹಲವು ಪ್ರತಿಭೆಗಳಿಗೆ ವೇದಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಮ್ಮಟದ ನಿರ್ದೇಶಕ ವಿ. ಮನೋಹರ್ ಅವರು ಹಾಡಿನ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.
ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ಶಿಬಿರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸ್ವರ ಚಿನ್ನಾರಿಯ ಗೌರವಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಂಗಚಿನ್ನಾರಿಯ ನಿರ್ದೇಶಕರೂ, ಖ್ಯಾತ ರಂಗಕರ್ಮಿ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಿ ಚಿನ್ನಾರಿ'ಯ ಕಾರ್ಯಾಧ್ಯಕ್ಷೆ ಸವಿತಾ ಟೀಚರ್, ರಂಗ ಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ರತ್ನಾಕರ ಓಡಂಗಲು ಪ್ರಾರ್ಥನೆ ಹಾಡಿದರು. ಸಾಸ್ವರ ಚಿನ್ನಾರಿಯ ಕಾರ್ಯಾಧ್ಯಕ್ಷ ಪುರುಷೋತ್ತಮ ಕುಪ್ಪಳ್ ಸ್ವಾಗತಿಸಿದರು. ಸಾಹಿತಿ ಗಣೇಶ್ ನಾಯಕ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ ಪೆರ್ಲ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಶಿಬಿರ ನಿರ್ದೇಶಕವವಿ. ಮನೋಹರ್ ಪ್ರಮಾಣ ಪತ್ರ ವಿತರಿಸಿದರು. ಶಿಬಿರಾರ್ಥಿಗಳಾದ ಶ್ರೀಮತಿ ಅನುಪಮಾ ಉಡುಪುಮೂಲೆ ಮತ್ತು ಶ್ರೀಪತಿ ಭಟ್ ಇವರು ಅನುಭವ ಹಂಚಿಕೊಂಡರು.



