ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿ, ಪನ್ನಿಯಾಡಿ ನಿವಾಸಿ ಪಿ. ಗೋಪಿ ಎಂಬಾತನಿಗೆ ಹೊಸದುರ್ಗ ಫಾಸ್ಟ್ ಟ್ರ್ಯಾಕ್ ಸ್ಪೆಶ್ಯಲ್ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ ಸುರೇಶ್ 49ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 3.60ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಮೂರು ವರ್ಷಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
2021 ಅಕ್ಟೋಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ 15ರ ಹರೆಯದ ಬಾಲಕಿಗೆ ಆಕೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬೇಡಡ್ಕ ಠಾಣೆ ಅಂದಿನ ಇನ್ಸ್‍ಪೆಕ್ಟರ್ ಟಿ. ದಾಮೋದರನ್ ಆರೋಪಿಯನ್ನು ಬಂಧಿಸಿದ್ದು, ಎಸ್.ಐ ಗಂಗಾಧರನ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.






