ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರದಿಂದ ಬಜೆಟ್ ಪೂರ್ವ ಸಮಾಲೋಚನೆ ನಡೆಸಿದ್ದಾರೆ.
2025-26ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರುವರಿ 1ರಂದು ಮಂಡನೆಯಾಗುವ ನಿರೀಕ್ಷೆಯಿದೆ. ಇದರ ಪೂರ್ವಭಾವಿಯಾಗಿ ಕೈಗಾರಿಕಾ ಸಂಘ-ಸಂಸ್ಥೆಗಳು, ತಜ್ಞರೊಟ್ಟಿಗೆ ಚರ್ಚಿಸಲಿದ್ದಾರೆ.
ನಿರ್ಮಲಾ ಅವರು ಸತತ ಎಂಟನೇ ಬಾರಿಗೆ ಮಂಡಿಸಲಿರುವ ಬಜೆಟ್ ಇದಾಗಿದೆ.
ಡಿಸೆಂಬರ್ 6ರಂದು ಅರ್ಥಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಲಿದ್ದಾರೆ. ಬಜೆಟ್ ಹಾಗೂ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಕುಸಿದಿರುವ ಬಗ್ಗೆ ಸಲಹೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 7ರಂದು ರೈತ ಸಂಘಟನೆಗಳು, ಕೃಷಿ ಅರ್ಥಶಾಸ್ತ್ರಜ್ಞರು, ಎಂಎಸ್‌ಎಂಇ ವಲಯದ ಪ್ರತಿನಿಧಿಗಳ ಜೊತೆಗೆ ಚರ್ಚಿಸಲಿದ್ದಾರೆ.
ಡಿಸೆಂಬರ್ 30ರಂದು ಸಮಾಲೋಚನೆ ಮುಕ್ತಾಯವಾಗಲಿದ್ದು ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ವಲಯದ ಪ್ರಮುಖರೊಟ್ಟಿಗೆ ಚರ್ಚಿಸಲಿದ್ದಾರೆ.




