HEALTH TIPS

ಸ್ಮಾರಕ ಸ್ಥಳದ ಬದಲು ನಿಗಮ್ ಬೋಧ್ ಘಾಟ್ ನಲ್ಲಿ ಅಂತ್ಯಕ್ರಿಯೆ: ಮನ್ ಮೋಹನ್ ಸಿಂಗ್, ಸಿಖ್ ಸಮುದಾಯಕ್ಕೆ ಅಪಮಾನ- ರಾಹುಲ್ ವಾಗ್ದಾಳಿ

ನವದೆಹಲಿ: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಸ್ಮಾರಕ ವಿಚಾರದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ಅಧಿಕೃತ ಸ್ಮಾರಕ ನಿರ್ಮಿಸುವ ಸ್ಥಳದ ಬದಲು ನಿಗಮಬೋಧ ಘಾಟ್ ನಲ್ಲಿ ಅಂತ್ಯಸಂಸ್ಕಾರ ಮಾಡುವ ಮೂಲಕ ಮನಮೋಹನ್ ಸಿಂಗ್ ಹಾಗೂ ಅವರ ಸಮುದಾಯವನ್ನು ಅಪಮಾನಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನಿಗಮ್ ಬೋಧ್ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಸುವ ಮೂಲಕ ಭಾರತದ ಹೆಮ್ಮೆಯ ಪುತ್ರ, ಸಿಖ್ ಸಮುದಾಯದ ಮೊದಲ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಸದ್ಯ ಆಡಳಿತದಲ್ಲಿರುವ ಸರ್ಕಾರ ಸಂಪೂರ್ಣವಾಗಿ ಅಪಮಾನಿಸಿದೆ ಎಂದು ಟೀಕಿಸಿದ್ದಾರೆ.

ಅತ್ಯಂತ ಗೌರವಯುತ ಹಾಗೂ ಸ್ಮಾರಕ ನಿರ್ಮಿಸುವ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಲು ಡಾ. ಮನ್ ಮೋಹನ್ ಸಿಂಗ್ ಅರ್ಹರಾಗಿದ್ದರು. ದೇಶದ ಹೆಮ್ಮೆಯ ಪುತ್ರ ಹಾಗೂ ಅವರ ಹೆಮ್ಮೆಯ ಸಮುದಾಯಕ್ಕೆ ಸರ್ಕಾರ ಗೌರವವನ್ನು ತೋರಿಸಬೇಕಿತ್ತು ಎಂದಿದ್ದಾರೆ.

ಇಲ್ಲಿಯವರೆಗಿನ ಎಲ್ಲಾ ಮಾಜಿ ಪ್ರಧಾನಿಗಳ ಅಂತ್ಯಸಂಸ್ಕಾರವನ್ನು ಅಧಿಕೃತ ಸಮಾಧಿ ಸ್ಥಳದಲ್ಲಿ ಮಾಡಲಾಗಿದೆ. ಇದರಿಂದ ಪ್ರತಿಯೊಬ್ಬರು ಯಾವುದೇ ಅನಾನುಕೂಲವಿಲ್ಲದೆ ಅಂತಿಮ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಬಹುದಾಗಿದೆ. ದಶಕಗಳ ಕಾಲ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ದೇಶ ಆರ್ಥಿಕವಾಗಿ ಸೂಪರ್ ಪವರ್ ಆಗಿತ್ತು. ಅವರ ಸರ್ಕಾರದ ನೀತಿಗಳು ಇಂದಿನ ದೇಶದ ಬಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮತ್ತೊಂದೆಡೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ಪ್ರತ್ಯೇಕ ಸ್ಮಾರಕ ಸ್ಥಳದಲ್ಲಿ ವಾಜಪೇಯಿ ಅವರ ಅಂತ್ಯಸಂಸ್ಕಾರ ಮಾಡಲಾಗಿತ್ತು. ಈಗ ಡಾ. ಮನ್ ಮೋಹನ್ ಸಿಂಗ್ ಅವರನ್ನು ನಿಗಮ್ ಬೋಧ ಘಾಟ್ ನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿದ್ದು, ಇಂತಹ ಆಯ್ದ ವರ್ತನೆ ಸರಿಯಲ್ಲ ಎಂದಿದ್ದಾರೆ.

ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ಡಾ.ಮನಮೋಹನ್ ಸಿಂಗ್ ಅವರನ್ನು ಅಂತ್ಯಸಂಸ್ಕಾರ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಬಳಿಕ ರಾಜಕೀಯ ವಿವಾದವೇರ್ಪಟ್ಟಿತ್ತು. ಆದಾಗ್ಯೂ ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಸೂಕ್ತ ಸ್ಥಳವನ್ನು ಹುಡುಕಲು ಕೆಲವು ದಿನಗಳು ಬೇಕಾಗುತ್ತವೆ ಎಂದು ಗೃಹ ಸಚಿವಾಲಯ ಇಂದು ಬೆಳಗ್ಗೆ ಖರ್ಗೆ ಮತ್ತು ಮನಮೋಹನ್ ಸಿಂಗ್ ಅವರ ಕುಟುಂಬಕ್ಕೆ ತಿಳಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries