HEALTH TIPS

ಸೆಲೆಬ್ರಿಟಿಗಳೇ ಅಭಿಮಾನಿಗಳನ್ನು ನಿಯಂತ್ರಿಸಬೇಕು, ನಟರೂ ಸಾಮಾಜಿಕ ಜವಾಬ್ದಾರಿ ಹೊರಬೇಕು: ತೆಲಂಗಾಣ ಸಿಎಂ ಖಡಕ್ ಸೂಚನೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಟಾಲಿವುಡ್ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ನಡುವಿನ ಮಹತ್ವದ ಸಭೆಯಲ್ಲಿ, ಟಾಲಿವುಡ್ ಚಿತ್ರರಂಗವು ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕು. ಸೆಲೆಬ್ರಿಟಿಗಳೇ ಅಭಿಮಾನಿಗಳನ್ನು ನಿಯಂತ್ರಿಸಬೇಕು ಎಂದು ಸಿಎಂ ಒತ್ತಿ ಹೇಳಿದರು.

ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ (ಎಫ್‌ಡಿಸಿ) ಅಧ್ಯಕ್ಷ ದಿಲ್ ರಾಜು ನೇತೃತ್ವದ ನಿಯೋಗವು ಬಂಜಾರಾ ಹಿಲ್ಸ್‌ನಲ್ಲಿರುವ ತೆಲಂಗಾಣ ರಾಜ್ಯ ಪೊಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚಿಸಿದರು.

ನಾಗಾರ್ಜುನ, ವರುಣ್ ತೇಜ್, ಸಾಯಿ ಧರಮ್ ತೇಜ್, ಕಲ್ಯಾಣ್ ರಾಮ್, ಶಿವ ಬಾಲಾಜಿ, ಅಡವಿ ಶೇಷ್, ನಿತಿನ್ ಮತ್ತು ವೆಂಕಟೇಶ್ ಮುಂತಾದ ನಟರು ಹಾಜರಿದ್ದವರಲ್ಲಿ ಸೇರಿದ್ದಾರೆ. ಕೊರಟಾಲ ಶಿವ, ಅನಿಲ್ ರವಿಪುಡಿ, ಕೆ ರಾಘವೇಂದ್ರ ರಾವ್, ಪ್ರಶಾಂತ್ ವರ್ಮ, ಸಾಯಿ ರಾಜೇಶ್ ಸೇರಿದಂತೆ ನಿರ್ದೇಶಕರು ಮತ್ತು ನಿರ್ಮಾಪಕರಾದ ಸುರೇಶ್ ಬಾಬು, ಕೆಎಲ್ ನಾರಾಯಣ, ದಾಮೋಧರ್, ಅಲ್ಲು ಅರವಿಂದ್, ಬಿವಿಎಸ್ಎನ್ ಪ್ರಸಾದ್, ಚಿನ್ನಾಬಾಬು ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪುಷ್ಪ-2 ನಟ ಅಲ್ಲು ಅರ್ಜುನ್ ಮತ್ತು ಮೈತ್ರಿ ಮೂವಿ ಮೇಕರ್ಸ್ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ನಂತರ ರಾಜ್ಯ ಸರ್ಕಾರವು ಬೆನಿಫಿಟ್ ಶೋಗಳಿಗೆ ಅನುಮತಿ ನೀಡುವುದಿಲ್ಲ ಮತ್ತು ಟಿಕೆಟ್ ದರಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.

ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ ಎಂ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗ ಶ್ರೀ ತೇಜ್ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಪುಷ್ಪ 2 ರ ಬೆನಿಫಿಟ್ ಶೋ ಸಂದರ್ಭದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ವವನ್ನು ತಿಳಿಸಿದರು.

ಸೆಲೆಬ್ರಿಟಿಗಳೇ ತಮ್ಮ ಅಭಿಮಾನಿಗಳನ್ನು ನಿಯಂತ್ರಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಅಲ್ಲದೆ ಸದ್ಯಕ್ಕೆ ಬೆನಿಫಿಟ್ ಶೋಗಳು ಅಥವಾ ಚಲನಚಿತ್ರಗಳ ವಿಶೇಷ ಪ್ರದರ್ಶನಗಳನ್ನು ನಿಷೇಧಿಸಿದ್ದಾರೆ. ಇನ್ನು ಅಲ್ಲು ಅರ್ಜುನ್‌ನಂತಹ ಉನ್ನತ ನಟರೊಂದಿಗೆ ಕೆಲಸ ಮಾಡುವ ಖಾಸಗಿ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries