ನವದೆಹಲಿ: ಅಂತರ್ಜಲ ಮತ್ತು ಮಣ್ಣಿನಲ್ಲಿ ಅತಿಯಾದ ಲೋಹ ಮಾಲಿನ್ಯದಿಂದ (ಆರ್ಸೆನಿಕ್) ಪಶ್ಚಿಮ ಬಂಗಾಳ, ಬಿಹಾರದಲ್ಲಿ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾಹಿತಿ ನೀಡಿದೆ.
ಕೈಗಾರಿಕಾ ಪ್ರದೇಶಗಳಲ್ಲಿ ಅಂತರ್ಜಲ ಮತ್ತು ಮಣ್ಣಿನಲ್ಲಿ ಅತಿಯಾದ ಲೋಹ ಮಾಲಿನ್ಯ (ಪಾದರಸ, ಕ್ಯಾಡ್ಮಿಯಮ್, ತಾಮ್ರ, ಸತು, ಸೀಸ, ಆರ್ಸೆನಿಕ್, ಅಲ್ಯೂಮಿನಿಯಂ) ಇರುವುದು ಪತ್ತೆಯಾಗಿದೆ ಎಂದು ಎನ್‌ಜಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಈಚೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಆರ್ಸೆನಿಕ್ ಮಾಲಿನ್ಯ ಕುರಿತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ಐಸಿಎಆರ್) ಪ್ರತಿಕ್ರಿಯೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಎನ್‌ಜಿಟಿ ಅಧ್ಯಕ್ಷ ಪ್ರಕಾಶ್ ಶ್ರೀವಾತ್ಸವ ಮತ್ತು ಪರಿಸರ ತಜ್ಞ ಎ.ಸೆಂಥಿಲ್ ವೇಲ್ ಅವರ ಪೀಠವು ವರದಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಆರ್ಸೆನಿಕ್ ಮಾಲಿನ್ಯದಿಂದ ಆಹಾರ ಪದಾರ್ಥಗಳ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸೊಪ್ಪುಗಳಲ್ಲಿ (ಪಾಲಕ್, ಮೆಂತ್ಯ ಇತ್ಯಾದಿ) ಮತ್ತು ಭೂಮಿಯೊಳಗೆ ಬೆಳೆಯುವ ತರಕಾರಿಗಳು (ಬೀಟ್ ರೂಟ್, ಮೂಲಂಗಿ ಇತ್ಯಾದಿ) ಹಾಗೂ ನೀರು ಅವಶ್ಯಕ ಬೆಳೆಯಾಗಿರುವ ಭತ್ತದಲ್ಲಿ (ಅಕ್ಕಿ) ವಿಷಕಾರಿ ಅಂಶ ಇರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.




