ನವದೆಹಲಿ: ಉತ್ತರ ಪ್ರದೇಶದ ಸಂಭಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ಲೋಕಸಭೆಯಲ್ಲಿ ಇಂದು ಚರ್ಚೆ ನಡೆಸಬೇಕೆಂಬ ಪಟ್ಟು ಹಿಡಿದಿರುವ ವಿಪಕ್ಷಗಳ ನಾಯಕರು ಸ್ವಲ್ಪ ಹೊತ್ತು ಸಭಾತ್ಯಾಗ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ಆರಂಭವಾದ ತಕ್ಷಣ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್, ಸಂಭಲ್ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿ ಚರ್ಚೆಗೆ ಸ್ಪೀಕರ್ ಓಂ ಬಿರ್ಲಾ ಅವರ ಅನುಮತಿಯನ್ನು ಕೋರಿದರು.
ಹಿಂಸಾಚಾರದಲ್ಲಿ ಐದು ಮಂದಿ ಮೃತಪಟ್ಟಿದ್ದು, ಇದು ಅತ್ಯಂತ ಗಂಭೀರವಾದ ವಿಷಯ' ಎಂದು ಅವರು ಮನವಿ ಮಾಡಿದರು.
ಈ ಕುರಿತು ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಬಹುದು ಎಂದು ಸ್ಪೀಕರ್ ಹೇಳುತ್ತಿದ್ದಂತೆ, ಯಾದವ್ ಸೇರಿದಂತೆ ಕೆಲವು ಸದಸ್ಯರು ಧಿಕ್ಕಾರ ಕೂಗಿ ಹೊರನಡೆದರು. ಇನ್ನು ಕೆಲವು ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿದರು.
ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ, ಶಿವ ಸೇನಾ (ಯುಬಿಟಿ) ಸದಸ್ಯರೂ ಸಮಾಜವಾದಿ ಪಕ್ಷದ ಸಂಸದರಿಗೆ ಬೆಂಬಲ ಸೂಚಿಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಸಭಾತ್ಯಾಗ ಮಾಡಿದರು.
ಬಳಿಕ ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಲು ವಿಪಕ್ಷಗಳ ಸದಸ್ಯರು ಸದನಕ್ಕೆ ಮರಳಿದ್ದಾರೆ.




