ಮಹಾಕುಂಭನಗರ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಪ್ರಯುಕ್ತ ಗಂಗಾ, ಯಮುನಾ ಮತ್ತು ಪುರಾಣ ಪ್ರಸಿದ್ಧ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ ದಾಖಲೆಯ 10 ಕೋಟಿ ದಾಟಿದೆ ಎಂದು ಸರ್ಕಾರ ತಿಳಿಸಿದೆ.
ಗುರುವಾರ(ಜ.23) ಮಧ್ಯಾಹ್ನ 12 ಗಂಟೆ ಹೊತ್ತಿಗೆ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ 10 ಕೋಟಿ ದಾಟಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ13 ರಂದು ಆರಂಭವಾಗಿರುವ ವಿಶ್ವದ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳವು ಫೆಬ್ರುವರಿ 26ರವರೆಗೆ ನಡೆಯಲಿದೆ.
ಪವಿತ್ರ ಸ್ನಾನ ಮಾಡಲು ಮಹಾಕುಂಭಮೇಳಕ್ಕೆ ಆಗಮಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಲಕ್ಷಗಳಷ್ಟು ಏರಿಕೆ ಕಂಡು ಈಗ 10 ಕೋಟಿ ದಾಟಿದೆ ಎಂದು ಸರ್ಕಾರ ಹೇಳಿದೆ. ಈ ಬಾರಿ ಕುಂಭಮೇಳಕ್ಕೆ 45 ಕೋಟಿ ಜನ ಆಗಮಿಸುವ ಅಂದಾಜು ಮಾಡಿರುವುದಾಗಿಯೂ ಸರ್ಕಾರ ಹೇಳಿದೆ.
ಪ್ರಯಾಗ್ ರಾಜ್‌ಗೆ ಆಗಮಿಸುತ್ತಿರುವ ಭಕ್ತರ ಉತ್ಸಾಹ ಕಿಂಚಿತ್ತೂ ಕಡಿಮೆ ಆಗಿಲ್ಲ. ದೇಶ, ವಿದೇಶಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕಾಗಿ ಆಗಮಿಸುತ್ತಿದ್ದಾರೆ. ಗುರುವಾರದ ದಿನ 12 ಗಂಟೆ ಹೊತ್ತಿಗೆ 10 ಲಕ್ಷ ಮಂದಿ ಕಲ್ಪವಾಸಿಗಳು ಸೇರಿ 30 ಲಕ್ಷ ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಕರ ಸಂಕ್ರಾಂತಿದ ದಿನ 3.5 ಕೋಟಿ ಮತ್ತು ಪೌಶ್ ಪೂರ್ಣಿಮಾ ದಿನ 1.7 ಕೋಟಿ ಭಕ್ತರು ಸ್ನಾನ ಮಾಡಿದ್ದರು ಎಂದು ತಿಳಿಸಿದೆ.
ಕೋಟ್ಯಂತರ ಮಂದಿ ಆಗಮಿಸುತ್ತಿದ್ದರೂ ಪ್ರಯೋಗ್ ರಾಜ್ ನಗರದ ಜನರ ದೈನಂದಿನ ಜೀವನಕ್ಕೆ ಯಾವುದೇ ತೊಡಕಾಗಿಲ್ಲ. ಬಹಳ ಧಾರ್ಮಿಕ ಮಹತ್ವವುಳ್ಳ ದಿನಗಳಂದು ಮಾತ್ರ ನಿರ್ಬಂಧ ಹೇರಲಾಗಿದೆ. ಉಳಿದಂತೆ, ಶಾಲೆ, ಸರ್ಕಾರಿ ಕಚೇರಿಗಳು ಮತ್ತು ವಾಣಿಜ್ಯ ಕೇಂದ್ರಗಳ ಚಟುವಟಿಕೆ ಸಾಮಾನ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.





