ಸುಲ್ತಾನ್‌ಪುರ: 2018ರ ಕರ್ನಾಟಕ ಚುನಾವಣೆಯಲ್ಲಿ ಮಾಡಿದ್ದ ಭಾಷಣಕ್ಕೆ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಕೋರ್ಟ್ ಫೆ. 11ಕ್ಕೆ ಮುಂದೂಡಿದೆ.
ರಾಹುಲ್ ಗಾಂಧಿ ಪರ ವಾದ ಮಂಡಿಸಬೇಕಿದ್ದ ವಕೀಲರು ಅನಾರೋಗ್ಯಕ್ಕೀಡಾಗಿದ್ದರಿಂದ ಗುರುವಾರ ನಿಗದಿಯಾಗಿದ್ದ ವಿಚಾರಣೆಯನ್ನು ವಿಶೇಷ ನ್ಯಾಯಮೂರ್ತಿ ಶುಭಂ ವರ್ಮಾ ಮುಂದೂಡಿದರು.
'ರಾಹುಲ್ ಗಾಂಧಿ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಅವರು ಅನಾರೋಗ್ಯಕ್ಕೀಡಾಗಿದ್ದರಿಂದ ವೈದ್ಯಕೀಯ ದಾಖಲಾತಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಹೀಗಾಗಿ ನ್ಯಾಯಾಧೀಶರು ಹೊಸ ದಿನಾಂಕ ನಿಗದಿ ಮಾಡಿದರು' ಎಂದು ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಿರುವ ವಿಜಯ್ ಮಿಶ್ರಾ ಪರ ವಕೀಲ ಸಂತೋಷ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
2018ರ ಕರ್ನಾಟಕ ಚುನಾವಣೆ ಸಂದರ್ಭ ರಾಹುಲ್ ಗಾಂಧಿ ಮಾಡಿದ್ದ ಅವಹೇಳನಕಾರಿ ಟೀಕೆಯಿಂದಾಗಿ ತಮ್ಮ ಮಾನಹಾನಿಯಾಗಿತ್ತು ಎಂದು ಆರೋಪಿಸಿ ವಿಜಯ್ ಮಿಶ್ರಾ ದೂರು ದಾಖಲು ಮಾಡಿದ್ದರು.
ಪ್ರಕರಣ ಸಂಬಂಧ ಕೋರ್ಟ್‌ಗೆ ಹಾಜರಾಗಲು ವಿಫಲರಾದ ರಾಹುಲ್ ಗಾಂಧಿ ವಿರುದ್ಧ 2023ರ ಡಿಸೆಂಬರ್‌ನಲ್ಲಿ ವಾರಂಟ್ ಕೂಡ ಹೊರಡಿಸಲಾಗಿತ್ತು.
ಫೆಬ್ರುವರಿ 2024ರಲ್ಲಿ ಕೋರ್ಟ್‌ಗೆ ಶರಣಾಗಿದ್ದರು. ಜುಲೈ 26ರಂದು ರಾಹುಲ್ ಗಾಂಧಿ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತ್ತು. ಬಳಿಕ ₹ 25 ಸಾವಿರದ ತಲಾ ಎರಡು ಭದ್ರತಾ ಠೇವಣಿ ಇರಿಸಲು ಸೂಚಿಸಿ ಜಾಮೀನು ನೀಡಿತ್ತು.




