ಚೆನ್ನೈ: ತಮಿಳುನಾಡಿನ ಈರೋಡ್ ಜಿಲ್ಲೆಯ ಎರಡು ಶಾಲೆಗಳಿಗೆ ಇಂದು ( ಮಂಗಳವಾರ) ಬಾಂಬ್ ಬೆದರಿಕೆಯ ಇ- ಮೇಲ್‌ಗಳು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈರೋಡ್ ಜಿಲ್ಲೆಯ ತಿಂಡಾಲ್ ಮತ್ತು ತೆರ್ಕುಪಳ್ಳಂನಲ್ಲಿರುವ ಭಾರತಿ ವಿದ್ಯಾಭವನದ ಎರಡು ಶಾಲೆಗಳಿಗೆ ಇ- ಮೇಲ್ ಮೂಲಕ ಅಪರಿಚಿತರು ಬಾಂಬ್ ಬೆದರಿಕೆಯೊಡ್ಡಿದ್ದಾರೆ.
ಈ ಬಗ್ಗೆ ಶಾಲಾ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿತ್ತು. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದವರು ಶೋಧ ಕಾರ್ಯಾಚರಣೆ ನಡೆಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇ- ಮೇಲ್ ಮೂಲಕ ಎರಡು ಶಾಲೆಗಳಿಗೆ ಬೆದರಿಕೆ ಬಂದ ಬಳಿಕ ಆತಂಕಕ್ಕೆ ಒಳಗಾದ ಶಿಕ್ಷಕರು ಮಕ್ಕಳನ್ನು ಮನೆಗಳಿಗೆ ವಾಪಸ್ ಕಳುಹಿಸಿದ್ದಾರೆ. ಶೋಧಕಾರ್ಯಾಚರಣೆಯ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್‌ನಲ್ಲಿ ಜಿಲ್ಲೆಯ ಮೂಲಪಾಳ್ಯಂನಲ್ಲಿರುವ ಜೆಸಿಸ್‌ಗೆ ಬಾಂಬ್ ಬೆದರಿಕೆ ಬಂದಿತ್ತು. ತನಿಖೆ ಬಳಿಕ ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ರಜೆ ಪಡೆದುಕೊಳ್ಳುವ ಉದ್ದೇಶದಿಂದ ಹುಸಿಬಾಂಬ್ ಬೆದರಿಕೆಯನ್ನು ಹಾಕಿದ್ದರು ಎಂದು ತಿಳಿದು ಬಂದಿದೆ.





