ತ್ರಿಶೂರ್: ವಿಯ್ಯೂರಿನ ಗರಿಷ್ಠ ಭದ್ರತೆಯ ಜೈಲಿನಲ್ಲಿ ಬೀಡಿ ಮಾರಾಟ ಮಾಡುತ್ತಿದ್ದ ಜೈಲು ನೌಕರನನ್ನು ಬಂಧಿಸಲಾಗಿದೆ. ಸಹಾಯಕ ಅಧಿಕಾರಿಕ ಶಂಶುದ್ದೀನ್ ಕೆ. ಪಿ ಬಂಧಿತರು. ನಿನ್ನೆ ಸೂಪರಿಂಟೆಂಡೆಂಟ್ ನೇತೃತ್ವದ ತಪಾಸಣಾ ತಂಡ ಶಂಶುದ್ದೀನ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿತ್ತು. ಈ ಹಿಂದೆ ಇದೇ ಅಧಿಕಾರಿ ವಿಯ್ಯೂರು ಸಬ್ ಜೈಲಿನಲ್ಲಿದ್ದಾಗ ಅಕ್ಕಿ ಮಾರಾಟ ಮಾಡಿದ್ದಕ್ಕಾಗಿ ಕ್ರಮ ಎದುರಿಸಿದ್ದರು.
ಶಂಶುದ್ದೀನ್ ಅವರು ಬೀಡಿ ಕಟ್ಟುಗಳನ್ನು ಕೈದಿಗಳಿಗೆ ಕೊಡಲು ಶೂ ಒಳಗೆ ಬಚ್ಚಿಟ್ಟು ಜೈಲಿಗೆ ತರುತ್ತಿದ್ದರು. ಪೊಲೀಸರು ಬಂಧನವನ್ನು ದಾಖಲಿಸಿಕೊಂಡು ಜಾಮೀನು ರಹಿತ ಆರೋಪ ಹೊರಿಸಿದ್ದಾರೆ. 20 ಚಿಕ್ಕ ಪೊಟ್ಟಣಗಳಿರುವ ಬೀಡಿ ಕಟ್ಟೆಗೆ 4 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿತ್ತು ಎಂದು ಕೈದಿಗಳು ಬಹಿರಂಗಪಡಿಸಿದ್ದಾರೆ. ಕೈದಿಗಳ ಸಂಬಂಧಿಕರು ಆನ್ ಲೈನ್ ನಲ್ಲಿ ಹಣ ಪಾವತಿಸಿದರೆ ಮರುದಿನ ಬೀಡಿ ಸಹಿತ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ.
ಭಯೋತ್ಪಾದಕ ಪ್ರಕರಣಗಳಲ್ಲಿ ಆರೋಪಿಗಳನ್ನು ಇರಿಸಲಾಗಿರುವ ಗರಿಷ್ಠ ಭದ್ರತಾ ಜೈಲಿನಲ್ಲಿ ಭಾರಿ ಭದ್ರತಾ ಲೋಪವಾಗಿದೆ. ಯುಎಪಿಎ ಮತ್ತು ಎನ್‌ಐಎ ಪ್ರಕರಣಗಳ ಆರೋಪಿಗಳು ಇಲ್ಲಿದ್ದಾರೆ. ಒಂದು ವರ್ಷದ ಹಿಂದೆಯೂ ಬೀಡಿ ಮಾರುತ್ತಿದ್ದ ನೌಕರನೋರ್ವ ಜೈಲು ಸೇರಿದ್ದರು.




