ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ನಡೆದ ಸ್ಥಳದಿಂದ ಸುಮಾರು 40 ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು ಎಂದು ಮೂರು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಮೌನಿ ಅಮಾವಾಸ್ಯೆ ದಿನವಾದ ಇಂದು(ಬುಧವಾರ) ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಜನರು ಪ್ರಯಾಗರಾಜ್‌ಗೆ ಬಂದಿದ್ದರು.
ಮುಂಜಾನೆ 3 ಗಂಟೆಯ ಸುಮಾರಿಗೆ ಪವಿತ್ರ ಸ್ನಾನ ಮಾಡಲು ಯಾತ್ರಾರ್ಥಿಗಳು ಒಮ್ಮೆಲೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ.
ಘಟನೆ ನಡೆದು 12 ಗಂಟೆ ಕಳೆದರೂ ಸಾವು-ನೋವುಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ. ಕರ್ನಾಟಕದ ನಾಲ್ವರು ಸೇರಿ ಇಲ್ಲಿಯವರೆಗೆ 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.




