ಬೀಜಿಂಗ್: ಕಳೆದ ವಾರ ಸಂಭವಿಸಿದ ಭೂಕಂಪನದ ಪರಿಣಾಮ, ಟಿಬೆಟ್‌ನಲ್ಲಿನ ಐದು ಜಲಾಶಯಗಳಲ್ಲಿ ತೊಂದರೆಗಳಿರುವುದನ್ನು ಪತ್ತೆ ಮಾಡಲಾಗಿದೆ ಎಂದು ಚೀನಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೇಶದ ನೈರುತ್ಯ ಭಾಗದಲ್ಲಿ ಕಳೆದ ವಾರ 6.8 ತೀವ್ರತೆಯ ಭೂಕಂಪನವಾಗಿತ್ತು. ಹೀಗಾಗಿ, ಈ ಭಾಗದಲ್ಲಿರುವ 14 ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅಣೆಕಟ್ಟುಗಳ ಪರಿಶೀಲನೆ ನಡೆಸಲಾಗಿತ್ತು.
ಈ ಪೈಕಿ 5 ಜಲಾಶಯಗಳಲ್ಲಿ ತೊಂದರೆಗಳು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಟಿಬೆಟ್‌ನ ತುರ್ತು ನಿರ್ವಹಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಐದು ಜಲಾಶಯಗಳ ಪೈಕಿ, ಮೂರು ಜಲಾಶಯಗಳನ್ನು ಖಾಲಿ ಮಾಡಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭೂಕಂಪನ ಕೇಂದ್ರ ದಾಖಲಾಗಿದ್ದ ಟಿಂಗ್ರಿ ಕೌಂಟಿಯಲ್ಲಿರುವ ಜಲಾಶಯವೊಂದರ ಗೋಡೆ ವಾಲಿರುವುದರಿಂದ, ತಗ್ಗು ಪ್ರದೇಶಗಳಲ್ಲಿರುವ ಆರು ಗ್ರಾಮಗಳ ಅಂದಾಜು 1,500 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

