ಗುವಾಹಟಿ: ಅಸ್ಸಾಂನ ದಿಮಾ ಜಸಾವೊ ಜಿಲ್ಲೆಯಲ್ಲಿರುವ ಕಲ್ಲಿದ್ದಲು ಗಣಿಯೊಳಗೆ ಸಿಲುಕಿರುವ 9 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡು ಏಳು ದಿನ ಕಳೆದಿದ್ದು, ಇಂದು (ಭಾನುವಾರ) ಕಾರ್ಮಿಕರೊಬ್ಬರ ಮೃತದೇಹವನ್ನು ಸುರಂಗದಿಂದ ಹೊರತೆಗೆಯಲಾಗಿದೆ.
ಈಚೆಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮೂವರು ಕಾರ್ಮಿಕರ ಮೃತದೇಹಗಳು ನೀರಿನಲ್ಲಿ ತೇಲುತ್ತಿರುವುದನ್ನು ರಕ್ಷಣಾ ತಂಡಗಳು ಪತ್ತೆ ಹಚ್ಚಿದ್ದವು.
ಸುರಂಗದಲ್ಲಿ ಸಿಲುಕಿರುವ ಉಳಿದ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆಯೇ ಇದೆ ಎನ್ನಲಾಗಿದೆ.
'ಸುರಂಗದ 85 ಅಡಿ ಆಳದಲ್ಲಿ ಮೃತದೇಹ ದೊರೆತಿದೆ. ಮೃತದೇಹದ ಗುರುತು ಪತ್ತೆಯಾಗಿಲ್ಲ. ಸುರಂಗದೊಳಗೆ ನೀರು ತುಂಬಿಕೊಂಡಿರುವುದರಿಂದ ಕತ್ತಲು ಆವರಿಸಿದೆ. ರಕ್ಷಣಾ ತಂಡಗಳು ಬಿಡುವಿಲ್ಲದೇ ರಕ್ಷಣಾ ಕಾರ್ಯದಲ್ಲಿ ತೊಡಗಿವೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'35 ಸದಸ್ಯರ ಎನ್‌ಡಿಆರ್‌ಎಫ್ ತಂಡ ಹಾಗೂ ಎಸ್‌ಡಿಆರ್‌ಎಫ್ ತಂಡ ಮತ್ತು ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





