ಪಟ್ನಾ: 'ಊಹೆಗೂ ನಿಲುಕದಷ್ಟು ಜನದಟ್ಟಣೆ ಇತ್ತು. ನಿಯಂತ್ರಣವೂ ಸಾಧ್ಯವಿರಲಿಲ್ಲ. ಬುಧವಾರ ನಸುಕಿನಲ್ಲಿ ತ್ರಿವೇಣಿ ಸಂಗಮವನ್ನು ಬೇಗನೇ ತಲುಪಬೇಕು ಎಂಬ ಧಾವಂತದಲ್ಲಿದ್ದ ಕೆಲ ಯಾತ್ರಾರ್ಥಿಗಳು ತಡೆಗೋಡೆ ಹತ್ತಲು ಯತ್ನಿಸಿದಾಗ, ಅದು ಕುಸಿಯಿತು. ಈ ವೇಳೆ ಹಲವರು ಕೆಳಗೆ ಬಿದ್ದರು.
ಸಾಗರೋಪಾದಿಯಲ್ಲಿ ನುಗ್ಗಿದ ಜನರು, ಬಿದ್ದವರನ್ನು ತುಳಿಯುತ್ತಾ ಸಾಗಿದರು..'
-ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿರುವ, ಬಿಹಾರದ ಗೋಪಾಲಗಂಜ್ ನಿವಾಸಿ ಸಂಗೀತಾ ಹೇಳುವ ಮಾತುಗಳಿವು. 'ಮೌನಿ ಅಮಾವಾಸ್ಯೆ' ನಿಮಿತ್ತ ಪುಣ್ಯಸ್ನಾನಕ್ಕಾಗಿ, ಶಿವಕಾಳಿ ದೇವಿ ಅವರು ತಮ್ಮ ಪುತ್ರಿ ಸಂಗೀತಾ ಅವರೊಂದಿಗೆ ಮಹಾ ಕುಂಭಕ್ಕೆ ತೆರಳಿದ್ದರು. ಅಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಶಿವಕಾಳಿ ದೇವಿ ಮೃತಪಟ್ಟಿದ್ದಾರೆ. ತಾಯಿಯನ್ನು ರಕ್ಷಿಸಲು ಮುಂದಾದ ಸಂಗೀತಾ ಅವರಿಗೆ ಗಾಯಗಳಾಗಿವೆ.
ಅಂದಿನ ಅವಘಡದಲ್ಲಿ, ಶಿವಕಾಳಿ ದೇವಿ ಒಳಗೊಂಡಂತೆ ಬಿಹಾರದ 7 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಇತರ 11 ಮಂದಿ ಇನ್ನೂ ಪತ್ತೆಯಾಗಿಲ್ಲ.




