ರಮಲ್ಲಾ : 15 ತಿಂಗಳ ಯುದ್ಧದ ಬಳಿಕ ಹಮಾಸ್ ವಶದಲ್ಲಿದ್ದ ಇಸ್ರೇಲ್‌ನ ಮೂರು ಮಂದಿ ಒತ್ತೆಯಾಳುಗಳು ಬಿಡುಗಡೆಯಾದ ಬೆನ್ನಲ್ಲೇ, ಇಸ್ರೇಲ್‌ನ ವಶದಲ್ಲಿದ್ದ 90ಕ್ಕೂ ಅಧಿಕ ಪ್ಯಾಲೆಸ್ಟೀನ್ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಕದನ ವಿರಾಮ ಏರ್ಪಟ್ಟ ಬೆನ್ನಲ್ಲೇ, ಉಭಯ ರಾಷ್ಟ್ರಗಳಲ್ಲಿ ಸಂಭ್ರಮಾಚರಣೆಗಳು ನಡೆದವು.
ಒಂದೂವರೆ ವರ್ಷದ ಬಳಿಕ ಗಾಜಾ ಹಾಗೂ ಇಸ್ರೇಲ್‌ನ ಆಕಾಶದಲ್ಲಿ ಯುದ್ಧವಿಮಾನಗಳ ಹಾರಾಟ ಇರಲಿಲ್ಲ. ಇದರ ಬೆನ್ನಲ್ಲೇ, ಪ್ಯಾಲೆಸ್ಟೀನಿಯನ್ನರು ಮರಳಿ ತಮ್ಮ ಮನೆಗಳತ್ತ ಮರಳುತ್ತಿದ್ದಾರೆ. ಸಂಬಂಧಿಕರು, ಸ್ನೇಹಿತರಿಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ. ಇಸ್ರೇಲ್‌ನ ಕಠಿಣ ನಿರ್ಬಂಧದ ಬಳಿಕ 600 ಟ್ರಕ್‌ನಷ್ಟು ಮಾನವೀಯ ನೆರವು ತುಂಬಿದ ವಸ್ತುಗಳು ಪ್ಯಾಲೆಸ್ಟೀನ್ ಪ್ರವೇಶಿಸಿದವು.
ಕುಟುಂಬ ಸೇರಿದ ಒತ್ತೆಯಾಳುಗಳು: ಹಮಾಸ್ ಬಂಡುಕೋರರಿಂದ ಬಿಡುಗಡೆಯಾದ ಇಸ್ರೇಲ್‌ನ ಒತ್ತೆಯಾಳುಗಳಾದ ಎಮಿಲಿ ಡಮರಿ, ರೊಮಿ ಗೊನೆನ್ ಹಾಗೂ ಡೊರೆನ್ ಸ್ಪೀನ್‌ಬ್ರಿಚೆರ್ ಅವರು ಕುಟುಂಬಸ್ಥರನ್ನು ಒಂದುಗೂಡಿದರು. ರೆಡ್‌ಕ್ರಾಸ್ ಸಂಸ್ಥೆಯ ಆಂಬುಲೆನ್ಸ್ ಮೂಲಕ ಕೆಳಗಿಳಿದ ಅವರನ್ನು ಟೆಲಿವಿಷನ್‌ನ ಮೂಲಕ ಇಸ್ರೇಲಿಗರು ಕಣ್ತುಂಬಿಕೊಂಡರು.
'ಇಡೀ ರಾಷ್ಟ್ರವೇ ನಿಮ್ಮನ್ನು ಅಪ್ಪಿಕೊಳ್ಳಲಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಈ ವೇಳೆ ತಿಳಿಸಿದರು.
ವೆಸ್ಟ್‌ಬ್ಯಾಂಕ್‌ನಲ್ಲಿ ಸಂಭ್ರಮಾಚರಣೆ: ಮತ್ತೊಂದೆಡೆ ಇಸ್ರೇಲ್ ವಶದಲ್ಲಿದ್ದ ಪ್ಯಾಲೆಸ್ಟೀನ್ ಕೈದಿಗಳನ್ನು ಬರಮಾಡಿಕೊಳ್ಳಲು ವೆಸ್ಟ್ ಬ್ಯಾಂಕ್‌ನ ರಮಲ್ಲಾದಲ್ಲಿ ಜನರು ಜಮಾಯಿಸಿದ್ದರು. ಸಾರ್ವಜನಿಕವಾಗಿ ಸಂಭ್ರಮಾಚರಣೆ ನಡೆಸದಂತೆ ಇಸ್ರೇಲ್ ಸೇನೆ ಎಚ್ಚರಿಕೆ ನೀಡಿದ ಹೊರತಾಗಿಯೂ ರಾತ್ರಿ 1 ಗಂಟೆಯವರೆಗೂ ಜನರು ಸೇರಿ ಅವರನ್ನು ಸ್ವಾಗತಿಸಿದರು. ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು. ವಾಹನದ ಮೇಲೆರಿ ಹಮಾಸ್ ಧ್ವಜ ಹಾರಿಸಿ, ಕುಣಿದು ಕುಪ್ಪಳಿಸಿದರು.
ಹಮಾಸ್ ಬಂಡುಕೋರರಿಂದ ಗಸ್ತು: ಇಸ್ರೇಲ್ ಸೇನೆಯ ದಾಳಿಯಿಂದ ತಲೆಮರೆಸಿಕೊಂಡಿದ್ದ ಸಾವಿರಾರು ಸಂಖ್ಯೆಯ ಹಮಾಸ್ ಪೊಲೀಸರು ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಬಂದೂಕುಧಾರಿಯಾಗಿ ಗಸ್ತು ನಡೆಸಿದರು. ಕೆಲವು ಕುಟುಂಬಗಳು ಅಳಿದುಳಿದ ವಸ್ತುಗಳನ್ನು ಗಾಡಿಯಲ್ಲಿ ಹೇರಿಕೊಂಡು ಮತ್ತೆ ತಮ್ಮ ಮನೆಗಳತ್ತ ಧಾವಿಸುವ ದೃಶ್ಯ ಕಂಡುಬಂತು. ಒಂದೂವರೆ ವರ್ಷದ ಬಳಿಕ ತಮ್ಮ ಊರುಗಳನ್ನು ನೋಡಿ ತೀವ್ರ ಸಂಕಟ ವ್ಯಕ್ತಪಡಿಸಿದರು.
'ಹಾಲಿವುಡ್‌ನ ಹಾರರ್ ಸಿನಿಮಾ ನೋಡಿ ಅನುಭವ ಉಂಟಾಗಿದೆ' ತಮ್ಮ ಮನೆಯ ಸ್ಥಿತಿ ಮೊಹಮ್ಮದ್ ಅಬು ತಹಾ ಬೇಸರ ವ್ಯಕ್ತಪಡಿಸಿದರು.
ಯುದ್ಧದಿಂದ ಗಾಜಾದಲ್ಲಿ ವಾಸಿಸುತ್ತಿದ್ದ ಶೇ 90ರಷ್ಟು ಮಂದಿ ನಿರ್ವಸಿತಗರಾಗಿದ್ದಾರೆ. ಅವುಗಳ ಮರುನಿರ್ಮಾಣಕ್ಕೆ ಬಹಳಷ್ಟು ವರ್ಷಗಳೇ ಬೇಕಿದ್ದು, ಗಾಜಾದ ಭವಿಷ್ಯದ ಕುರಿತಂತೆ ಅನಿಶ್ಚಿತತೆ ಮೂಡಿದೆ.
ಕದನ ವಿರಾಮ ಉಲ್ಲಂಘಿಸಿದರೆ ಇಸ್ರೇಲ್‌ಗೆ ಬೆಂಬಲ- ಅಮೆರಿಕ
ವಾಷಿಂಗ್ಟನ್: 'ಗಾಜಾದ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಹಮಾಸ್ ಬಂಡುಕೋರರು ಉಲ್ಲಂಘಿಸಿದರೆ ಇಸ್ರೇಲ್ ಜೊತೆಗೆ ನಿಲ್ಲಲಿದೆ' ಎಂದು ಅಮೆರಿಕದ ನೂತನ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ತಿಳಿಸಿದ್ದಾರೆ.
'ಹಮಾಸ್ ಬಂಡುಕೋರರು ಪ್ಯಾಲೆಸ್ಟೀನ್‌ನಲ್ಲಿ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಇಸ್ರೇಲ್‌ನ ನಿರ್ಧಾರಕ್ಕೆ ಟ್ರಂಪ್ ಆಡಳಿತವು ಸದಾ ಬೆಂಬಲಿಸಲಿದೆ' ಎಂದು ತಿಳಿಸಿದರು.





