ನವದೆಹಲಿ: ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು(ವಿದ್ಯಾರ್ಥಿನಿಯರಿಗೆ ಈಗಾಗಲೇ ಈ ಸೌಲಭ್ಯವಿದೆ) ನೀಡಲಾಗುವುದು ಎಂದು ಎಎಪಿ ಶುಕ್ರವಾರ ಘೋಷಿಸಿದೆ.
ಎಲ್ಲ ವಿದ್ಯಾರ್ಥಿಗಳಿಗೆ ಮೆಟ್ರೊ ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲು ಅನುಮತಿ ನೀಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿಯೂ ಎಎಪಿ ಹೇಳಿದೆ.
'ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಮತ್ತು ಯಾರೂ ರಾಜಕೀಯ ಮಾಡಬಾರದು' ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
'ಮೆಟ್ರೊ ಪ್ರಯಾಣ ದರ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಆದ್ದರಿಂದ ಪ್ರಧಾನಿಗೆ ಮನವಿ ಮಾಡಿದ್ದೇನೆ. ಈ ಯೋಜನೆಗೆ ಬೇಕಾದ ಅರ್ಧದಷ್ಟು ಹಣವನ್ನು ಭರಿಸಲು ಸಿದ್ಧರಿದ್ದೇವೆ' ಎಂದು ಹೇಳಿದರು.





