ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಐಫೋನ್ ತಯಾರಿಸುವ ಅಮೆರಿಕದ ಆಯಪಲ್ ಕಂಪನಿಯ ಸಂಸ್ಥಾಪಕರಾಗಿದ್ದ ದಿ.ಸ್ಟೀವ್ ಜಾಬ್ಸ್ ಪತ್ನಿ ಲ್ಯೂರೆನ್ ಪೊವೆಲ್ ಜಾಬ್ಸ್ ಅವರಿಗೆ 'ಅಮೃತ ಸ್ನಾನ'ದ ಬಳಿಕ ಅಲರ್ಜಿ ಸಮಸ್ಯೆ ಕಾಡಿದ ಕಾರಣ ವಿಶೇಷ ವಿಮಾನದ ಮೂಲಕ ಭೂತಾನ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಪೊವೆಲ್ ಭೂತನ್‌ನಲ್ಲಿ ಕೆಲವು ದಿನಗಳ ಕಾಲ ಉಳಿದುಕೊಳ್ಳಲಿದ್ದಾರೆ.
ಕುಂಭಮೇಳಕ್ಕೆ ಬಂದಿದ್ದಾಗ ಪೊವೆಲ್ ಅವರು ನಿರಂಜನಿ ಆಖಾರದ ಮಹಾಮಂಡಳೇಶ್ವರದ ಸ್ವಾಮಿ ಕೈಲಾಸಾನಂದ ಅವರ ಶಿಬಿರದಲ್ಲಿ ಉಳಿದುಕೊಂಡಿದ್ದರು. ಪಾವೆಲ್ ಅವರನ್ನು ಸ್ವಾಮಿಗಳು ಮಗಳಂತೆ ದತ್ತು ಸ್ವೀಕಾರ ಮಾಡಿ 'ಕಮಲ' ಎಂದು ನಾಮಕರಣ ಮಾಡಿದ್ದರು.
'ಕಳೆದ ಮಂಗಳವಾರ ಪೊವೆಲ್ ಅವರು ಮಂತ್ರ ದೀಕ್ಷೆ ಪಡೆದುಕೊಂಡಿದ್ದಾರೆ. ಕಾಳಿ ಮಂತ್ರದ ಮೇಲೆ ಅವರು ದೀಕ್ಷೆ ಪಡೆದುಕೊಂಡಿದ್ದಾರೆ. ಇನ್ನು ಅವರು ದೀಕ್ಷೆಯಲ್ಲಿನ ಆಚರಣೆಯ ಪ್ರಕಾರ ಮಂತ್ರವನ್ನು ಪಠಿಸಬಹುದು' ಎಂದು ಹಿರಿಯ ಸಾಧುವೊಬ್ಬರು ತಿಳಿಸಿದ್ದಾರೆ.
ಕಳೆದ ಸೋಮವಾರ ಪೊವೆಲ್ ಅವರು ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು. ಆದರೆ ಜನಸಂದಣಿಯ ನಡುವೆ ವಾಸವಿದ್ದ ಕಾರಣ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.





