ನವದೆಹಲಿ: ಯಮುನಾ ನದಿ ದಂಡೆಯಲ್ಲಿರುವ 'ರಾಷ್ಟ್ರೀಯ ಸ್ಮೃತಿ ಸ್ಥಳ'ದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಸಮಾಧಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸ್ಥಳ ಗುರುತಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಮಾಧಿಗೆ ನೀಡಿದ ಜಾಗದ ಸಮೀಪವೇ ಸಿಂಗ್ ಅವರ ಸಮಾಧಿಗೂ ಕೇಂದ್ರ ಸರ್ಕಾರ ಸ್ಥಳ ಗುರುತು ಮಾಡಿದೆ. ಕೇಂದ್ರ ಸರ್ಕಾರ ಗುರುತು ಮಾಡಿದ ಜಾಗಕ್ಕೆ ಸಿಂಗ್ ಕುಟುಂಬಸ್ಥರಿಂದ ಒಪ್ಪಿಗೆ ಸಿಗಬೇಕಷ್ಟೆ.
ನಿಯಮಗಳ ಪ್ರಕಾರ, ಸಿಂಗ್ ಕುಟುಂಬಸ್ಥರು ಟ್ರಸ್ಟ್ ಒಂದನ್ನು ರಚಿಸಬೇಕು. ಬಳಿಕ ಸಮಾಧಿ ನಿರ್ಮಾಣಕ್ಕೆ ಆ ಟ್ರಸ್ಟ್‌ಗೆ ಭೂಮಿ ಹಸ್ತಾಂತರಿಸಲಾಗುತ್ತದೆ.
ವಸತಿ ಹಾಗೂ ನಗರ ವ್ಯವಹಾರಗಳ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಇತ್ತೀಚೆಗೆ ಸಿಂಗ್ ಕುಟುಂಬಸ್ಥರನ್ನು ಭೇಟಿ ಮಾಡಿ, ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ 1.5 ಎಕರೆ ಸ್ಥಳ ಗುರುತಿಸಿರುವುದರ ಬಗ್ಗೆ ಮಾಹಿತಿ ನೀಡಿದ್ದರು.





