ನವದೆಹಲಿ: ಗಣರಾಜ್ಯೋತ್ಸವ ಪರೇಡ್‌ಗೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಗೈರಾಗಿರುವ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಇದು ರಾಷ್ಟ್ರೀಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅವರು ಕಡೆಗಣಿಸಿರುವುದನ್ನು ಹೇಳುತ್ತದೆ ಎಂದು ಟೀಕಿಸಿದೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು, 'ದಾಖಲೆಗಾಗಿ, ಸಂವಿಧಾನದ ಸ್ವಯಂ ಘೋಷಿತ ರಕ್ಷಕರಾದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು' ಎಂದು ಕುಟುಕಿದ್ದಾರೆ.
ಇದು ರಾಷ್ಟ್ರ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಅವರ ನಿರ್ಲಕ್ಷವನ್ನು ಎತ್ತಿತೋರಿಸುತ್ತದೆ ಎಂದಿದ್ದಾರೆ.
ಪ್ರತಿ ವರ್ಷ ವಿರೋಧ ಪಕ್ಷಗಳ ಪ್ರಮುಖ ನಾಯಕರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಈ ಬಾರಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದರು. ಆದರೆ, ಎಕ್ಸ್ ಪೋಸ್ಟ್ ಮೂಲಕ ಉಭಯ ನಾಯಕರು ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದರು.
ಭಾನುವಾರ 76ನೇ ಗಣರಾಜ್ಯೋತ್ಸವವನ್ನು ದೇಶ ವಿದೇಶಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳು, ಅನಿವಾಸಿ ಭಾರತೀಯರು ಧ್ವಜಾರೋಹಣ ಮಾಡಿ ಗೌರವ ಅರ್ಪಿಸಿದರು.




