ತಿರುವನಂತಪುರಂ: ನಿಲಂಬೂರು ಶಾಸಕ ಪಿ.ವಿ. ಅನ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ಸ್ಪೀಕರ್ ಎ.ಎನ್. ಶಂಸೀರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಲಾಯಿತು.
ಅನ್ವರ್ ಅಧಿಕೃತವಾಗಿ ಎಡಪಕ್ಷಗಳೊಂದಿಗಿನ ಸಂಬಂಧವನ್ನು ಕಡಿದುಕೊಂಡರು ಮತ್ತು ಯುಡಿಎಫ್‍ಗೆ ಬೇಷರತ್ತಾದ ಬೆಂಬಲವನ್ನು ಘೋಷಿಸಿದರು.
ತೃಣಮೂಲ ಕಾಂಗ್ರೆಸ್‍ನ ರಾಜ್ಯ ಸಂಯೋಜಕರಾಗಿ ಕೆಲಸ ಮಾಡಲು ನಿರ್ಧರಿಸಿರುವ ಅನ್ವರ್, ನಿನ್ನೆ ಕೋಲ್ಕತ್ತಾದಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದರು. ಶಾಸಕರ ನೇಮ್ ಬೋರ್ಡ್ ತೆಗೆದುಹಾಕಲಾದ ಕಾರಿನಲ್ಲಿ ಅನ್ವರ್ ಇಂದು ಸ್ಪೀಕರ್ ಅವರನ್ನು ಭೇಟಿಯಾಗಲು ಆಗಮಿಸಿದ್ದರು.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆಯಂತೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ತಮ್ಮೊಂದಿಗಿದ್ದ ನಿಲಂಬೂರಿನ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪಿವಿ ಅನ್ವರ್ ಹೇಳಿದ್ದಾರೆ. ರಾಜೀನಾಮೆ ಸಲ್ಲಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅನ್ವರ್ ತಮ್ಮನ್ನು ವಿಧಾನಸಭೆಗೆ ಕರೆತಂದ ಎಡರಂಗದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.
11 ರಂದು ಸ್ಪೀಕರ್‍ಗೆ ಆನ್‍ಲೈನ್‍ನಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೆ ಮತ್ತು ರಾಜೀನಾಮೆ ಪತ್ರವನ್ನು ಸ್ವಂತ ಕೈಬರಹದಲ್ಲಿ ಬರೆಯಬೇಕೆಂಬ ನಿಯಮ ಇರುವುದರಿಂದ ಇಂದು ಅದನ್ನು ಖುದ್ದಾಗಿ ನೀಡಬೇಕಾಯಿತು ಎಂದು ಅವರು ಪ್ರತಿಕ್ರಿಯಿಸಿದರು. ರಾಜೀನಾಮೆಯನ್ನು ಅಂಗೀಕರಿಸುವ ಜವಾಬ್ದಾರಿ ಸ್ಪೀಕರ್ ಅವರ ಮೇಲಿದೆ ಎಂದು ಅನ್ವರ್ ಹೇಳಿದರು.
ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ವಿರುದ್ಧದ ಆರೋಪಗಳನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಪಿ. ಶಶಿಯ ನಿರ್ದೇಶಾನುಸಾರ ಹೇಳಿದ್ದೆ.ನನ್ನ ಸ್ವಂತ ಯಾವುದೇ ಅಭಿಪ್ರಾಯಗಳಲ್ಲ. ಅದಕ್ಕಾಗಿ ಕ್ಷಮೆ ಕೇಳುವುದಾಗಿ ಅನ್ವರ್ ಬಹಿರಂಗಪಡಿಸಿದರು. 150 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ್ದಿದ್ದÀವು. ಸತೀಶನ್ ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಅನ್ವರ್ ಹೇಳಿದರು.
ತಾನು ಮತ್ತೆ ನಿಲಂಬೂರಿನಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು. ಎಸ್ ಜಾಯ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಮತ್ತು ಅವರು ಗುಡ್ಡಗಾಡು ಪ್ರದೇಶದ ಸಮಸ್ಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವ್ಯಕ್ತಿ ಎಂದು ಅನ್ವರ್ ಹೇಳಿದರು. ತೃಣಮೂಲ ಕಾಂಗ್ರೆಸ್‍ಗೆ ಅಧಿಕೃತವಾಗಿ ಸೇರಿದ ನಂತರ ಅನ್ವರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2011 ರ ವಿಧಾನಸಭಾ ಚುನಾವಣೆಯಲ್ಲಿ ಎರನಾಡ್ ಕ್ಷೇತ್ರದ ಅಧಿಕೃತ ಎಡ ಅಭ್ಯರ್ಥಿಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳುವ ಮೂಲಕ ಪಿ.ವಿ. ಅನ್ವರ್ ತಮ್ಮ ರಾಜಕೀಯ ಪ್ರವೇಶವನ್ನು ಗಮನಾರ್ಹವಾಗಿಸಿದರು. ಆ ಸಮಯದಲ್ಲಿ ಅನ್ವರ್ ಅವರ ಶಕ್ತಿಯನ್ನು ಗುರುತಿಸಿದ ಎಡಪಂಥೀಯರು, 2016 ರಲ್ಲಿ ನೀಲಂಬೂರ್ ವಶಪಡಿಸಿಕೊಳ್ಳುವ ಕೆಲಸವನ್ನು ಅನ್ವರ್ ಅವರಿಗೆ ವಹಿಸಿದರು. ಅದು ಇತಿಹಾಸವಾಯಿತು.
2016 ರಲ್ಲಿ ನಿಲಂಬೂರ್ ವಶಪಡಿಸಿಕೊಂಡ ಪಿ.ವಿ. ಅನ್ವರ್, 2021 ರಲ್ಲಿಯೂ ಅದನ್ನೇ ಪುನರಾವರ್ತಿಸಿದರು ಮತ್ತು ಆ ಕ್ಷೇತ್ರವು ಅನ್ವರ್ ಅವರ ಏಕಸ್ವಾಮ್ಯವಾಯಿತು. 2016 ಕ್ಕೆ ಹೋಲಿಸಿದರೆ 2021 ರಲ್ಲಿ ಅನ್ವರ್ ಕ್ಷೇತ್ರದಲ್ಲಿ ಹೆಚ್ಚಿನ ಮತ ಪಡೆದಿದ್ದರು.
ಅವರು 2014 ರಲ್ಲಿ ವಯನಾಡ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು 2019 ರಲ್ಲಿ ಪೊನ್ನಾನಿಯಲ್ಲಿ ಎಡಪಕ್ಷ ಪಕ್ಷೇತರರಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದರೆ ಪರಾಭವಗೊಂಡಿದ್ದರು.
ಎಐಸಿಸಿ ಮಾಜಿ ಸದಸ್ಯ ಹಾಗೂ ಎಡವಣ್ಣ ಪಂಚಾಯತ್ ಅಧ್ಯಕ್ಷ ಪಿ.ವಿ. ಶೌಕತಾಲಿಯವರ ಪುತ್ರ ಅನ್ವರ್ ಕಾಂಗ್ರೆಸ್ ನ ಹಳೆಯ ಕಾರ್ಯಕರ್ತ. ಅವರು ವಿದ್ಯಾರ್ಥಿ ರಾಜಕೀಯದ ಮೂಲಕ ಸಾರ್ವಜನಿಕ ಸೇವೆಗೆ ಪ್ರವೇಶಿಸಿದರು. ಕೆಎಸ್‍ಯು-ಎಸ್.ನಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ರಾಜ್ಯ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್ ಮಲಪ್ಪುರಂ ಜಿಲ್ಲಾ ಉಪಾಧ್ಯಕ್ಷರಾಗಿ ಮತ್ತು ಡೆಮಾಕ್ರಟಿಕ್ ಇಂದಿರಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.





