ತಿರುವನಂತಪುರಂ: ಶರೋನ್ ರಾಜ್ ಕೊಲೆ ಪ್ರಕರಣದ ಆರೋಪಿ ಗ್ರೀಷ್ಮಾಗೆ ಮರಣದಂಡನೆ ವಿಧಿಸಿರುವುದನ್ನು ಸ್ವಾಗತಿಸಿ, ಪುರುಷರ ಸಂಘಟನೆಯಾದ ಅಖಿಲ ಕೇರಳ ಪುರುಷರ ಸಂಘ (ಎಕೆಎಂಎ) ಸಂಭ್ರಮಾಚರಣೆ ಪ್ರದರ್ಶನವನ್ನು ಆಯೋಜಿಸುತ್ತಿದೆ.
ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ಎ.ಎಂ. ಬಶೀರ್ ಅವರ ಕಟೌಟ್‍ಗೆ ಬುಧವಾರ ಹಾಲಿನ ಅಭಿಷೇಕ ನೆರವೇರಿಸಲಾಗುವುದು.
ಕ್ಷೀರಾಭಿಷೇಕದ ಜೊತೆಗೆ, ಸಂಘವು ಪಟಾಕಿಗಳನ್ನು ಸಿಡಿಸುವುದರ ಮೂಲಕವೂ ಸಂಭ್ರಮಿಸಲಿದೆ ಎಂದು ಹೇಳಿಕೊಂಡಿದೆ. ಈ ಕಾರ್ಯಕ್ರಮ ಇಂದು ಬೆಳಿಗ್ಗೆ 11.30 ಕ್ಕೆ ಸೆಕ್ರಟರಿಯೇಟ್ (ಸಚಿವಾಲಯ) ಮುಂದೆ ನಡೆಯಲಿದೆ. ರಾಹುಲ್ ಈಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಆದರೆ, ಈ ತೀರ್ಪಿನ ವಿರುದ್ದ ರಿಟ್ ಅರ್ಜಿ ಸಲ್ಲಿಸಲಾಗುವುದೆಂದು ಹೇಳಿರುವ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಕೆಮಾಲ್ ಪಾಷಾ ಅವರ ವಿರುದ್ಧವೂ ಪ್ರತಿಭಟನೆ ಈ ಸಂದರ್ಭ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ವಟ್ಟಿಯೂರ್ಕಾವು ಅಜಿತ್ ಕುಮಾರ್ ಘೋಷಿಸಿದ್ದಾರೆ.
ಶರೋನ್ ಕೊಲೆ ಪ್ರಕರಣದಲ್ಲಿ ನೆಯ್ಯಾಟ್ಟಿಂಗರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮೊನ್ನೆ ಆರೋಪಿ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಶರೋನ್ ಪ್ರೀತಿ ಮತ್ತು ವಿಶ್ವಾಸವನ್ನು ಉಲ್ಲಂಘಿಸಿ ಗ್ರೀಷ್ಮಾ ಮಾಡಿದ ಕೊಲೆ ಅಪರೂಪದಲ್ಲಿ ಅಪರೂಪ ಎಂದು ಗಮನಿಸಿದ ನ್ಯಾಯಾಲಯವು ಆಕೆಗೆ ಶಿಕ್ಷೆ ವಿಧಿಸಿತ್ತು.
ಗ್ರೀಷ್ಮಾಗೆ ಮರಣ ದಂಡನೆ ಜೊತೆಗೆ ವಿವಿಧ ಕಲಮುಗಳ ಅಡಿಯಲ್ಲಿ 3.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಆ ಮೊತ್ತವನ್ನು ಶರೋನ್‍ಳ ಪೋಷಕರಿಗೆ ಪಾವತಿಸಬೇಕು. ಸಾಕ್ಷ್ಯ ನಾಶಪಡಿಸಿದ ಅಪರಾಧಕ್ಕಾಗಿ ಮೂರನೇ ಆರೋಪಿ ಮತ್ತು ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್‍ಗೆ 3 ವರ್ಷ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಯಿತು.





