ಅಗಳಿ: ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಶೋಲೂರು ಪಂಚಾಯತಿ ಗೊಂಚಿಯೂರು ವನವಾಸಿ ಗ್ರಾಮದಲ್ಲಿ ವಿಶ್ವ ಸೇವಾ ಭಾರತಿ ನಿರ್ಮಿಸಿದ ಕುಡಿಯುವ ನೀರು ಮತ್ತು ಕೃಷಿ ನೀರಾವರಿ ಯೋಜನೆಯನ್ನು ಆರ್.ಎಸ್.ಎಸ್. ಸಹಪ್ರಾಂತ ಸೇವಾಪ್ರಮುಖ ಕೆ.ದಾಮೋದರನ್ ನಿನ್ನೆ ಉದ್ಘಾಟಿಸಿದರು.
ಗೊಂಚಿಯೂರು ಉರುಮೂಪನ್(ಗುರಿಕಾರ ಎಂಬುದಕ್ಕೆ ಸಂವಾದಿ) ಪೊನ್ನುಸ್ವಾಮಿ ಪಳನಿ ಮೂಪನ್ ಅಧ್ಯಕ್ಷತೆ ವಹಿಸಿದ್ದರು. ಈ ಯೋಜನೆಯನ್ನು ಅಟ್ಟಪ್ಪಾಡಿ ಸ್ವಾಮಿ ವಿವೇಕಾನಂದ ವೈದ್ಯಕೀಯ ಮಿಷನ್ ಸಹಯೋಗದೊಂದಿಗೆ ಜಾರಿಗೆ ತರಲಾಗಿದೆ.
ಗೊಂಚಿಯೂರಿನಲ್ಲಿ ಇರುಳ ಸಮುದಾಯಕ್ಕೆ ಸೇರಿದ 98 ಕುಟುಂಬಗಳಿವೆ. ಮಳೆಯ ಕೊರತೆ ಮತ್ತು ತೀವ್ರ ನೀರಿನ ಕೊರತೆಯಿಂದಾಗಿ ವರ್ಷಗಳ ಹಿಂದೆ ಇಲ್ಲಿ ಸ್ಥಳೀಯ ಕೃಷಿ ನಿಂತುಹೋಯಿತು. ವನ್ಯಜೀವಿ ಹಾವಳಿಯೂ ತೀವ್ರವಾಗಿದೆ. ಔಷಧೀಯ ಸಸ್ಯ ಕೃಷಿಗಾಗಿ ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶ್ವ ಸೇವಾ ಭಾರತಿ ನೇತೃತ್ವದಲ್ಲಿ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದನ್ನು ನಬಾರ್ಡ್‍ನ ಆರ್ಥಿಕ ನೆರವಿನೊಂದಿಗೆ ಪ್ರಾರಂಭಿಸಲಾಗಿದೆ.
ಗ್ರಾಮದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಹೊಳೆಯಿಂದ 25,000 ಲೀಟರ್ ಸಂಗ್ರಹಣಾ ಸಾಮಥ್ರ್ಯದ ಟ್ಯಾಂಕ್‍ಗೆ ನೀರನ್ನು ಪೈಪ್‍ಗಳ ಮೂಲಕ ಸಾಗಿಸಲಾಗುತ್ತದೆ. ಈ ಯೋಜನೆಯು ಇಲ್ಲಿಂದ ತೋಟಗಳು ಮತ್ತು ಮನೆಗಳಿಗೆ ಗುರುತ್ವಾಕರ್ಷಣ ನೀರಾವರಿ ಮೂಲಕ ನೀರನ್ನು ತಲುಪಿಸುವುದನ್ನು ಒಳಗೊಂಡಿರುತ್ತದೆ. ವಿಶ್ವಸೇವಾ ಭಾರತಿ ರಾಜ್ಯ ಜೊತೆ ಕಾರ್ಯದರ್ಶಿ ಟಿ.ಆರ್. ರಾಜನ್, ಖಜಾಂಚಿ ರಾಜನ್, ಸ್ವಾಮಿ ವಿವೇಕಾನಂದ ವೈದ್ಯಕೀಯ ಮಿಷನ್ ಉಪಾಧ್ಯಕ್ಷ ವಿ.ವಿ. ಪರಶುರಾಮ್, ಎ. ಕೃಷ್ಣನ್‍ಕುಟ್ಟಿ ಮತ್ತು ಸಾಯುರಾಜ್ ಭಾಗವಹಿಸಿದ್ದರು.





