ಜೈಪುರ : ಯುದ್ಧದಿಂದ ಜರ್ಜರಿತವಾಗಿರುವ ಪ್ರದೇಶಗಳ ಮತ್ತು ದ್ವೇಷದ ವರ್ತುಲದಲ್ಲಿ ಸಿಲುಕಿ ಕ್ಷೋಭೆಗೆ ಒಳಗಾಗಿರುವ ಜನರ ಗಾಯಕ್ಕೆ ಸಾಹಿತ್ಯ, ಚಿಂತನೆ, ಕಲೆಯ ಮೂಲಕ ಮದ್ದು ಹುಡುಕುವ ಆಶಯದೊಂದಿಗೆ ಜೈಪುರ ಸಾಹಿತ್ಯ ಉತ್ಸವ ಗುರುವಾರ ಆರಂಭಗೊಂಡಿದೆ.
'ಪಿಂಕ್ ಸಿಟಿ' ಎಂದೇ ಹೆಸರುಳಿಸಿಕೊಂಡಿರುವ ಜೈಪುರದ ಲಾಲ್‌ಬಹದ್ದೂರ್ ನಗರದ ಕ್ಲಾರ್ಕ್ಸ್ ಆಮೆರ್ ಹೋಟೆಲ್ ಐದು ದಿನಗಳ ಜೈಪುರ ಲಿಟ್‌ಫೆಸ್ಟ್‌ಗೆ ವೇದಿಕೆಯಾಗಿದೆ.
ನೊಬೆಲ್, ಬೂಕರ್‌ನಿಂದ ಹಿಡಿದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಮತ್ತು ಇತರ ಸಾಧಕರು ಒಳಗೊಂಡಂತೆ ದೇಶ-ವಿದೇಶಗಳ 300 ಮಂದಿಯ ಮಾತು, ಅನುಭವದ ನುಡಿಗಳಿಗೆ ಸಾಕ್ಷಿಯಾಗಲು ಹಸಿರು ಹುಲ್ಲಿನ ಅಂಗಣ, ದರ್ಬಾರ್ ಹಾಲ್ ಸೇರಿದಂತೆ 7 ವೇದಿಕೆಗಳು ಸಜ್ಜಾಗಿವೆ. ಉತ್ಸವದ ನಿತ್ಯದ ಕಾರ್ಯಕ್ರಮಗಳಿಗೆ ಮುಂಜಾನೆಯ ಸಂಗೀತ ಲಯ ತುಂಬಲಿದ್ದು ಸಂಜೆಗಳನ್ನು ಗಾಯಕರು ರಾಗ-ತಾಳದ ಸೊಬಗಿನಿಂದ ರಂಗಾಗಿಸಲಿದ್ದಾರೆ. ಪುಸ್ತಕ ಮೇಳ, ಉತ್ಸವ ಬಜಾರ್, ಹೊನಲು ಬೆಳಕಿನ ಮಾರುಕಟ್ಟೆ, ಜಾಗತಿಕ ಪ್ರಕಾಶನ ಸಂಸ್ಥೆಗಳ ಒಗ್ಗೂಡುವಿಕೆಯೂ ಉತ್ಸವದಲ್ಲಿ ಇದೆ.
ಅಪರಾಧ ಜಗತ್ತಿಗೆ ಸಂಬಂಧಿಸಿದ ಕಾಲ್ಪನಿಕ ಸಾಹಿತ್ಯ ಲಿಟ್‌ಫೆಸ್ಟ್‌ನ 18ನೇ ಆವೃತ್ತಿಯ ಮುಖ್ಯ ಆಶಯವಾಗಿದ್ದು 'ಗಾಯಗೊಂಡ ಜಗತ್ತು' ಎಂಬ ವಿಷಯದಲ್ಲಿ ಪಶ್ಚಿಮ ಏಷ್ಯಾ ಹಾಗೂ ಉಕ್ರೇನ್‌ನ ಯುದ್ಧಪೀಡಿತ ಪ್ರದೇಶ, ಪ್ರಾದೇಶಿಕ ರಾಜಕೀಯ ಮತ್ತು ಸಂಘರ್ಷಗಳು ಚರ್ಚೆಗೆ ಬರಲಿವೆ. ಭಾರತದ 16 ಭಾಷೆ ಸೇರಿದಂತೆ ಒಟ್ಟು 32 ಭಾಷೆಗಳಲ್ಲಿ ಸಂವಹನ ಆಗಲಿದೆ.
97 ವಿಷಯಗಳು
ಸಾಹಿತ್ಯ, ಕಲೆ, ಪರಿಸರ, ಹವಾಮಾನ ಬದಲಾವಣೆ, ಕ್ರೀಡೆ, ಪ್ರಯಾಣ, ಇತಿಹಾಸ, ವನಿತೆಯರ ಚರಿತ್ರೆ, ವೈದ್ಯಕೀಯ, ರಾಜಕೀಯ ಸೇರಿದಂತೆ 97 ವಸ್ತು ವಿಷಯಗಳು ಗೋಷ್ಠಿಗಳ ಪಟ್ಟಿಯಲ್ಲಿವೆ. ಅಫ್ಗಾನಿಸ್ತಾನ, ನೆದರ್ಲೆಂಡ್, ಐರ್ಲೆಂಡ್, ಚೀನಾ, ಅಸ್ಸಾಂ, ಗುಜರಾತ್ ಮತ್ತು ಆತಿಥೇಯ ರಾಜಸ್ಥಾನದ ಬಗ್ಗೆಯೂ ಚರ್ಚೆ ನಡೆಯಲಿದ್ದು ಮಹಿಳೆ, ಸಂಸ್ಕೃತಿ, ಮನರಂಜನೆ, ಆವಿಷ್ಕಾರ, ಬುದ್ಧಿಸಂ, ರಂಗಭೂಮಿ, ಸಿನಿಮಾ, ಹಾಸ್ಯ, ಅಪರಾಧ, ಶಿಕ್ಷಣ, ಡಿಜಿಟಲ್ ಲೋಕ ಇತ್ಯಾದಿಗಳ ಮೇಲೆಯೂ ಬೆಳಕು ಹರಡಲಿದೆ.
ಭಾರತದಲ್ಲಿ ಜನಿಸಿ ಅಮೆರಿಕದಲ್ಲಿ ನೆಲೆಸಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಭಾರತದ ಆಹಾರ, ಸಂಸ್ಕೃತಿ ಮತ್ತು ಸಮಾಜದ ಬಗ್ಗೆ ಮಾತನಾಡಲಿದ್ದಾರೆ. ನೊಬೆಲ್ ಪ್ರಶಸ್ತಿ ಗಳಿಸಿರುವ ಎಸ್ತೆರ್ ಡಫ್ಲೊ, ವೆಂಕಿ ರಾಮಕೃಷ್ಣನ್ ಮತ್ತು ಕೈಲಾಶ್ ಸತ್ಯಾರ್ಥಿ ಅವರೂ ಪಾಲ್ಗೊಳ್ಳಲಿದ್ದಾರೆ. ಬೂಕರ್ ಪ್ರಶಸ್ತಿ ಪುರಸ್ಕೃತರಾದ ಜೆನಿ ಎರ್ಪನ್‌ಬೆಕ್, ಮೈಕಲ್ ಹೋಪ್‌ಮನ್ ಮತ್ತು ಚಾರ್ಲೊಟಿ ವುಡ್, ಆಧುನಿಕ ಕಥಾಲೋಕಕ್ಕೆ ಕನ್ನಡಿ ಹಿಡಿಯುವರು. ಸುಧಾ ಮೂರ್ತಿ, ಶಶಿ ತರೂರ್, ನಮಿತಾ ಗೋಖಲೆ ಅವರೂ ಮಾತಿನ ಝರಿ ಹರಿಸುವವರ ಸಾಲಿನಲ್ಲಿದ್ದಾರೆ.ಗಾಯಗೊಂಡಿರುವ ವಿಶ್ವವು ಯುದ್ಧ ಮತ್ತು ದ್ವೇಷದಿಂದ ತತ್ತರಿಸಿದೆ. ಈ ಬಾರಿಯ ಸಾಹಿತ್ಯ ಉತ್ಸವದ ಅನೇಕ ಗೋಷ್ಠಿಗಳ ಚರ್ಚೆಯಲ್ಲಿ ಇಂಥ ವಿಷಯಗಳು ಪ್ರತಿಫಲನಗೊಳ್ಳಲಿವೆ. -ನಮಿತಾ ಗೋಖಲೆ ಜೆಎಲ್‌ಎಫ್ ಸಹ ನಿರ್ದೇಶಕಿ
ಅತಿಥಿ ಸತ್ಕಾರಕ್ಕೆ ಸಿದ್ಧತೆ ನಡೆಸುರುತ್ತಿರುವ ಕಾರ್ಯಕರ್ತರು-ನಮಿತಾ ಗೋಖಲೆ ಜೆಎಲ್‌ಎಫ್ ಸಹ ನಿರ್ದೇಶಕಿಗಾಯಗೊಂಡಿರುವ ವಿಶ್ವವು ಯುದ್ಧ ಮತ್ತು ದ್ವೇಷದಿಂದ ತತ್ತರಿಸಿದೆ. ಈ ಬಾರಿಯ ಸಾಹಿತ್ಯ ಉತ್ಸವದ ಅನೇಕ ಗೋಷ್ಠಿಗಳ ಚರ್ಚೆಯಲ್ಲಿ ಇಂಥ ವಿಷಯಗಳು ಪ್ರತಿಫಲನಗೊಳ್ಳಲಿವೆ.
ಸಂಗೀತದ ಅಲೆ ಸಾಹಿತ್ಯ ಉತ್ಸವದಲ್ಲಿ ಸಂಗೀತದ ಅಲೆ ಎಬ್ಬಿಸಲು ಪ್ರತ್ಯೇಕ ವೇದಿಕೆ ಕಲ್ಪಿಸಲಾಗಿದೆ. ಸೂಫಿ ಸಂತ ಅಮೀರ್ ಖುಸ್ರೊ ಮತ್ತು ಅನುಭಾವದ ಕವಿ ಸಂತ ಕಬೀರ್ ದಾಸ್ ನೆನಪಿನೊಂದಿಗೆ ಮೊದಲ ದಿನ ಸಂಜೆ ಸಂಗೀತ ಕುಸುಮ ಅರಳುವ ವೇದಿಕೆಯಲ್ಲಿ ಶಾಸ್ತ್ರೀಯ ಜನಪದ ರಾಕ್ ಮತ್ತು ಫ್ಯೂಜನ್ ಸಂಗೀತ ಹರಿಯಲಿದೆ.




