ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಅಮೆರಿಕಕ್ಕೆ ಕಾನೂನುಬದ್ಧವಾಗಿ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದ ಬೈಡನ್ ಸರ್ಕಾರದ 'ಸಿಬಿಪಿ ಒನ್' ಆಯಪ್ ಅನ್ನು ಡೊನಾಲ್ಡ್ ಟ್ರಂಪ್ ಸ್ಥಗಿತಗೊಳಿಸಿದ್ದಾರೆ.
ಟ್ರಂಪ್ ಪ್ರಮಾಣವಚನದ ಬೆನ್ನಲ್ಲೇ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್(ಸಿಬಿಪಿ) ವೆಬ್‌ಸೈಟ್‌ನಲ್ಲಿ ಆಯಪ್ ರದ್ದಾಗಿರುವ ಬಗ್ಗೆ ಸೂಚನೆ ಕಾಣಿಸಿಕೊಂಡಿದೆ. 'ಎಂಟನೇ ನೈರುತ್ಯ ಗಡಿ ಪ್ರವೇಶದ್ವಾರಗಳಲ್ಲಿ ನೇಮಕಾತಿ ನಿಗದಿಪಡಿಸುವುದಕ್ಕಾಗಿ ಬಳಸಲಾಗುತ್ತಿರುವ ಆಯಪ್ ಈಗ ಲಭ್ಯವಿಲ್ಲ. ಈಗಾಗಲೇ ನಿಗದಿಪಡಿಸಿದ ನೇಮಕಾತಿಗಳನ್ನು ರದ್ದುಪಡಿಸಲಾಗಿದೆ' ಎಂಬ ಸಂದೇಶ ಬಂದಿದೆ.
'ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಎಲ್ಲಾ ಅಕ್ರಮ ಪ್ರವೇಶವನ್ನು ತಕ್ಷಣವೇ ನಿಲ್ಲಿಸಲಾಗುವುದು. ಲಕ್ಷಾಂತರ ವಿದೇಶಿಗರನ್ನು ಅವರು ಬಂದ ಸ್ಥಳಗಳಿಗೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ನಾವು ತಕ್ಷಣ ಪ್ರಾರಂಭಿಸುತ್ತೇವೆ' ಎಂದು ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದಾರೆ.

