ಮಹಾಕುಂಭ ನಗರ: ಪ್ರಯಾಗರಾಜ್‌ನ ಗಂಗಾನದಿ ದಡದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಮುಂದಿನ ಪುಣ್ಯಸ್ನಾನ 'ಮೌನಿ ಅಮಾವಾಸ್ಯೆ'ಯಂದು ನಿಗದಿಯಾಗಿದ್ದು, 10 ಕೋಟಿಗೂ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ತ್ರಿವೇಣಿ ಸಂಗಮದಲ್ಲಿ 'ಪುಣ್ಯಸ್ನಾನ'ದ ವೇಳೆ ನಿಗದಿಪಡಿಸಿದ ಸಮಯ ಅನುಸರಿಸಬೇಕು ಎಂದು 13 ಅಖಾಡಾಗಳಿಗೆ ಮನವಿ ಮಾಡಲಾಗಿದೆ.
ಜ.29ರಂದು 'ಮೌನಿ ಅಮಾವಾಸ್ಯೆ' ಇದ್ದು, 144 ವರ್ಷಗಳ ಬಳಿಕ ಗ್ರಹಗಳು ಸಂಯೋಜನೆಯಾಗುತ್ತದೆನ್ನುವ ನಂಬಿಕೆಯ ಕಾರಣ ಆ ದಿನವನ್ನು 'ಅತ್ಯಂತ ಪವಿತ್ರ' ಎಂದು ಭಾವಿಸಲಾಗಿದೆ. ಆ ದಿನ ನಡೆಯುವ 'ಪುಣ್ಯಸ್ನಾನ'ದ ವೇಳೆ ಗೊಂದಲ ತಡೆಯುವ ನಿಟ್ಟಿನಲ್ಲಿ, ಶೈವ, ವೈಷ್ಣವ ಸಂಪ್ರದಾಯವನ್ನು ಅನುಸರಿಸುವ 13 ಅಖಾಡಗಳನ್ನು ಒಳಗೊಂಡ 'ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ)ಯು ಸಭೆ ನಡೆಸಿ, ಈ ನಿರ್ಧಾರ ಪ್ರಕಟಿಸಿದೆ.
'ಪ್ರತಿ ಅಖಾಡವು ನಿಗದಿಪಡಿಸಿದ ಸಮಯಕ್ಕಿಂತ ಐದು ನಿಮಿಷ ಮುಂಚಿತವಾಗಿ ಘಾಟ್‌ನಿಂದ ತೆರವುಗೊಳಿಸಬೇಕು' ಎಂದು ಎಬಿಎಪಿ ಮುಖ್ಯಸ್ಥ ಮಹಂತ್ ರವೀಂದ್ರಪುರಿ ತಿಳಿಸಿದರು.
ಕಿನ್ನರ ಅಖಾಡದಲ್ಲಿ ಬೆಂಕಿ: ಸೆಕ್ಟರ್ 16ರಲ್ಲಿರುವ 'ಕಿನ್ನರ ಅಖಾಡ' ಶಿಬಿರದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿತು.
'ಬೆಳಿಗ್ಗೆ 9.30ರ ಸುಮಾರಿಗೆ ಅನ್ನ ಕ್ಷೇತ್ರದಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣವೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದರು' ಎಂದು ಅಧಿಕಾರಿಗಳು ತಿಳಿಸಿದರು.
ಪರಿಶೀಲನೆ ವೇಳೆ 'ಶ್ರೀ ಹರಿ ದಿವ್ಯಾ ಸಾಧ್ನಾ ಪೀಠ ಶಿಬಿರ'ದಲ್ಲಿ ಬೆಂಕಿ ಕಾಣಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ' ಎಂದು ತಿಳಿಸಿದರು.

ಪ್ರಯಾಗ್‌ರಾಜ್‌ನ ಗಂಗಾ ನದಿ ದಡದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಅಂಗವಾಗಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಭಾಗಿಯಾದ ಭಕ್ತರು





