ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪವಾಸ ಕೈಗೊಂಡಿರುವ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಅವರನ್ನು ಸೋಮವಾರ ಭೇಟಿ ಮಾಡಿದ ಸುಪ್ರೀಂ ಕೋರ್ಟ್ ನೇಮಿಸಿರುವ ಉನ್ನತಾಧಿಕಾರ ಸಮಿತಿಯು, ವೈದ್ಯಕೀಯ ನೆರವು ಪಡೆಯುವಂತೆ ಅವರನ್ನು ಒತ್ತಾಯಿಸಿತು.
ಸಮಿತಿಯ ಅಧ್ಯಕ್ಷ, ನ್ಯಾಯಮೂರ್ತಿ ನವಾಬ್ ಸಿಂಗ್ ಅವರು ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಖಾನೌರಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಡಲ್ಲೇವಾಲ್ ಅವರನ್ನು ಭೇಟಿ ಮಾಡಿದರು.
ಇದಕ್ಕೂ ಮೊದಲು, ಭೇಟಿ ನಡೆಯಲಿದೆ ಎಂಬ ವಿಷಯವನ್ನು ಪಂಜಾಬ್ ಸರ್ಕಾರವು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿತು.
ನ್ಯಾಯಮೂರ್ತಿ ನವಾಬ್ ಸಿಂಗ್ ಅವರನ್ನು ಭೇಟಿ ಮಾಡುವಂತೆ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಮನವೊಲಿಸಲಾಗಿದೆ ಎಂದು ಪಂಜಾಬ್ ಸರ್ಕಾರದ ಪರವಾಗಿ ವಕೀಲ ಕಪಿಲ್ ಸಿಬಲ್ ಅವರು ಪೀಠಕ್ಕೆ ತಿಳಿಸಿದರು. 'ಒಳ್ಳೆಯದಾಗುತ್ತದೆ ಎಂದು ಆಶಿಸೋಣ' ಎಂದು ಹೇಳಿದ ಪೀಠವು ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿದೆ.
ಸೋಮವಾರದ ಭೇಟಿ ಸಂದರ್ಭದಲ್ಲಿ ಏನಾಯಿತು ಎಂಬ ಬಗ್ಗೆ ಕಿರು ಟಿಪ್ಪಣಿಯೊಂನ್ನು ಸಮಿತಿಯು ಸಲ್ಲಿಸಲಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಲ್ಲೇವಾಲ್ ಅವರು ಅನಿರ್ದಿಷ್ಟಾವಧಿ ಉಪವಾಸವನ್ನು ನವೆಂಬರ್ 26ರಿಂದ ನಡೆಸುತ್ತಿದ್ದಾರೆ. ಡಲ್ಲೇವಾಲ್ ಅವರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ಸಂಚಾಲಕ. ಆರೋಗ್ಯ ಹದಗೆಡುತ್ತಿದ್ದರೂ ಡಲ್ಲೇವಾಲ್ ಅವರು ವೈದ್ಯಕೀಯ ನೆರವು ಪಡೆಯಲು ನಿರಾಕರಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಅಸಮಾಧಾನಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಸಮಿತಿಯನ್ನು ರಚಿಸಿದೆ.
ಡಲ್ಲೇವಾಲ್ ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ನವಾಬ್ ಸಿಂಗ್, 'ಅವರು ಆರೋಗ್ಯವಾಗಿ ಇರಬೇಕು ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ... ನಾನು ಇಲ್ಲಿಗೆ ಇಂದು ಬಂದಿರುವುದು ಪ್ರತಿಭಟನೆಯನ್ನು ಕೊನೆಗೊಳಿಸಬೇಕು ಎನ್ನಲು ಅಲ್ಲ. ಡಲ್ಲೇವಾಲ್ ಅವರಲ್ಲಿ ತಮ್ಮ ಆರೋಗ್ಯ ಚೆನ್ನಾಗಿರಬೇಕು ಎನ್ನಲು ಬಂದಿದ್ದೇನೆ. ತಮಗೆ ಬೇಕೆಂದಾಗ ನಾವು ಇಲ್ಲಿರುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ' ಎಂದರು.
ತಮ್ಮ ಪಾಲಿಗೆ ಕೃಷಿ ಮೊದಲು, ಆರೋಗ್ಯ ನಂತರ ಎಂಬುದನ್ನು ಡಲ್ಲೇವಾಲ್ ಅವರು ಸಮಿತಿಗೆ ತಿಳಿಸಿದ್ದಾರೆ ಎಂದು ನವಾಬ್ ಸಿಂಗ್ ಹೇಳಿದರು.





