HEALTH TIPS

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

 ಕೋಲ್ಕತ್ತ: ಇಲ್ಲಿನ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣದಲ್ಲಿ ಅಪರಾಧಿ ಸಂಜಯ್‌ ರಾಯ್‌ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 103(1)ರ ಅಡಿಯಲ್ಲಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹50,000 ದಂಡ ವಿಧಿಸಲಾಗಿದೆ ಎಂದು ಸಿಯಾಲದಹ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ತಿಳಿಸಿದ್ದಾರೆ.

ರಾಯ್ ಎಸಗಿರುವ ಅಪರಾಧವು 'ಅಪರೂಪದಲ್ಲಿ ಅಪರೂಪದ ಪ್ರಕರಣ'ಗಳ ಸಾಲಿಗೆ ಬರುವುದಿಲ್ಲವಾದ ಕಾರಣ ಈತನಿಗೆ ಮರಣದಂಡನೆ ವಿಧಿಸಿಲ್ಲ ಎಂದು ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಹೇಳಿದ್ದಾರೆ. ಮೃತ ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರವಾಗಿ ₹17 ಲಕ್ಷ ನೀಡಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಅಪರಾಧಿ ರಾಯ್, ಆತನ ಪರ ವಕೀಲರು ಹಾಗೂ ಸಂತ್ರಸ್ತೆಯ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಆಲಿಸಿದ ನಂತರ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 64ರ ಅಡಿಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗುತ್ತಿದೆ ಎಂದು ನ್ಯಾಯಾಧೀಶರು ಹೇಳಿದರು.

ಬಿಎನ್‌ಎಸ್‌ನ ಸೆಕ್ಷನ್ 103(1)ರ ಅಡಿಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲಾಗಿದೆ. ಸೆಕ್ಷನ್‌ 66ರ ಅಡಿಯಲ್ಲಿ ಅಪರಾಧಿಗೆ ಸಾಯುವವರೆಗೂ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಧೀಶ ದಾಸ್ ಹೇಳಿದರು. ಎಲ್ಲ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ.

ಅಪರಾಧಿಗೆ ಮರಣ ದಂಡನೆ ವಿಧಿಸಬೇಕು ಎಂದು ಸಿಬಿಐ ಕೋರಿತು. ಆದರೆ ಮರಣ ದಂಡನೆಯ ಬದಲು ಜೈಲು ಶಿಕ್ಷೆ ವಿಧಿಸಬೇಕು ಎಂದು ಅಪರಾಧಿಯ ಪರ ವಕೀಲರು ಕೋರಿದರು.

ತಮ್ಮ ಆದೇಶವನ್ನು ಪ್ರಶ್ನಿಸಿ ಕಲ್ಕತ್ತ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕು ರಾಯ್‌ಗೆ ಇದೆ, ಮೇಲ್ಮನವಿ ಸಲ್ಲಿಸುವುದಾದರೆ ಹಾಗೂ ಅಗತ್ಯವಿದ್ದರೆ ಕಾನೂನು ನೆರವು ಒದಗಿಸಲಾಗುತ್ತದೆ ಎಂದು ದಾಸ್ ಅವರು ಹೇಳಿದರು.

ಇದಕ್ಕೂ ಮೊದಲು ರಾಯ್‌, ತಾನು ನಿರಪರಾಧಿ, ತನ್ನನ್ನು ಅಪರಾಧಿ ಎಂದು ಘೋಷಿಸಿರುವುದು ತಪ್ಪು ಎಂದು ಹೇಳಿದ್ದ. 'ನಾನು ಅಪರಾಧ ಎಸಗಿಲ್ಲ... ಹೀಗಿದ್ದರೂ ನನ್ನನ್ನು ಅಪರಾಧಿ ಎಂದು ಘೋಷಿಸಲಾಗಿದೆ' ಎಂದು ಶಿಕ್ಷೆ ಪ್ರಮಾಣ ಪ್ರಕಟವಾಗುವ ಮೊದಲು ರಾಯ್‌ ನ್ಯಾಯಾಲಯಕ್ಕೆ ಹೇಳಿದ್ದ.

ಮರಣ ದಂಡನೆ ವಿಧಿಸಬೇಕು: ಬಿಜೆಪಿ

ಕೋಲ್ಕತ್ತ/ನವದೆಹಲಿ: ಅಪರಾಧಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಬಿಜೆಪಿಯ ಹಿರಿಯ ಮುಖಂಡ ಅಗ್ನಿಮಿತ್ರ ಪೌಲ್ 'ಆತನಿಗೆ ಮರಣ ದಂಡನೆ ವಿಧಿಸಬೇಕು' ಎಂದು ಆಗ್ರಹಿಸಿದ್ದಾರೆ. ಈ ಅಪರಾಧದಲ್ಲಿ ಭಾಗಿಯಾದ ಇತರರನ್ನು ಪತ್ತೆ ಮಾಡಲು ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. 'ಅಣಕ': ಜೀವಾವಧಿ ಶಿಕ್ಷೆ ವಿಧಿಸಿರುವುದು 'ನ್ಯಾಯದಾನದ ಅಣಕ' ಎಂದು ಬಿಜೆಪಿ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ. ಈ ಆದೇಶವನ್ನು ಮೇಲಿನ ಹಂತದ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಸಾಕ್ಷ್ಯಗಳನ್ನು ನಾಶ‍ಪಡಿಸಿದ ಕೃತ್ಯದಲ್ಲಿ ಅಂದಿನ ಕೋಲ್ಕತ್ತ ಆಯುಕ್ತರು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾತ್ರದ ಬಗ್ಗೆ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಮಾಧಾನ ಇಲ್ಲ: ಪಾಲಕರು

ಕೋಲ್ಕತ್ತ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ತಮಗೆ ಸಮಾಧಾನ ತಂದಿಲ್ಲ ಎಂದು ವೈದ್ಯ ವಿದ್ಯಾರ್ಥಿನಿಯ ತಂದೆ-ತಾಯಿ ಹೇಳಿದ್ದಾರೆ. ಈ ಅಪರಾಧ ಕೃತ್ಯದಲ್ಲಿ ಭಾಗಿಯಾದ ಇತರ ಹಲವರನ್ನು ರಕ್ಷಿಸಲಾಗಿದೆ ತನಿಖೆಯನ್ನು ಪೂರ್ಣ ಮನಸ್ಸಿನಿಂದ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ. ನ್ಯಾಯ ಕೋರಿ ತಾವು ಮೇಲಿನ ಹಂತದ ನ್ಯಾಯಾಲಯದ ಮೊರೆಹೋಗುವುದಾಗಿ ಅವರು ತಿಳಿಸಿದ್ದಾರೆ.

'ನಮಗೆ ಆಘಾತವಾಗಿದೆ. ಕರ್ತವ್ಯದಲ್ಲಿದ್ದ ವೈದ್ಯೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲ್ಲಲಾಗಿದೆ. ಇದು ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣ ಏಕೆ ಅಲ್ಲ? ನಮಗೆ ನಿರಾಶೆಯಾಗಿದೆ. ಈ ಅಪರಾಧದ ಹಿಂದೆ ದೊಡ್ಡ ಪಿತೂರಿ ಇತ್ತು' ಎಂದು ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ. ಇತರ ಎಲ್ಲ ಅಪರಾಧಿಗಳಿಗೆ ಶಿಕ್ಷೆ ಆಗುವವರೆಗೂ ತಾವು ಹೋರಾಟ ನಡೆಸುವುದಾಗಿ ತಂದೆ ಹೇಳಿದ್ದಾರೆ. ತಮಗೆ ಪರಿಹಾರ ಮೊತ್ತ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು ಎಂದು ಧರಣಿ ನಡೆಸಿದ್ದ ಕಿರಿಯ ವೈದ್ಯರು ಕೂಡ ತನಿಖೆಯು ಇನ್ನಷ್ಟು ವಿಸ್ತೃತವಾಗಿ ಆಗಬೇಕು ಎಂದು ಆಗ್ರಹಿಸಿದ್ದಾರೆ.

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಅಪರಾಧಿಗೆ ಮರಣ ದಂಡನೆ ವಿಧಿಸಬೇಕು ಎಂದು ನಾವೆಲ್ಲ ಆಗ್ರಹಿಸಿದ್ದೆವು... ಕೋಲ್ಕತ್ತ ಪೊಲೀಸರು ತನಿಖೆ ನಡೆಸಿದ್ದಿದ್ದರೆ ಆತನಿಗೆ ಮರಣ ದಂಡನೆ ಆಗುವಂತೆ ನೋಡಿಕೊಳ್ಳುತ್ತಿದ್ದೆವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries