HEALTH TIPS

ಸಹಬಾಳ್ವೆಯ ತೀರ್ಪು ಅನುಸರಿಸದಿದ್ದರೂ ಜೀವನಾಂಶಕ್ಕೆ ಪತ್ನಿ ಅರ್ಹ: ಸುಪ್ರೀಂ ಕೋರ್ಟ್

 ನವದೆಹಲಿ: ಪತಿಯೊಂದಿಗೆ ಬಾಳದಿರಲು ಸಾಕಷ್ಟು ಮಾನ್ಯ ಮಾಡುವಂತಹ ಕಾರಣಗಳಿದ್ದು, ಸಹಬಾಳ್ವೆಯ ತೀರ್ಪನ್ನು ಪಾಲಿಸಲು ನಿರಾಕರಿಸಿದರೂ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಪತ್ನಿಗೆ ಇದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾ. ಸಂಜಯ್ ಕುಮಾರ್‌ ಅವರಿದ್ದ ಪೀಠವು ಈ ಕುರಿತ ಅರ್ಜಿಯೊಂದನ್ನು ವಿಲೇವಾರಿ ಮಾಡಿ, 'ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ಆದೇಶವನ್ನು ಪತಿ ಹೊಂದಿದ್ದರೂ ಅದನ್ನು ಪಾಲಿಸಲು ಪತ್ನಿ ನಿರಾಕರಿಸಿ, ಪತಿಯ ಮನೆ ಸೇರಿದರೂ ಜೀವನಾಂಶ ಪಡೆಯುವುದು ರದ್ದಾಗುವುದಿಲ್ಲ ಎಂದಿದೆ.

ಇಂಥ ಪ್ರಕರಣಗಳಲ್ಲಿ ನಿರ್ದಿಷ್ಟ ಹಾಗೂ ತ್ವರಿತ ಕಾನೂನುಗಳಿಲ್ಲ. ಹಾಗೆಯೇ ಈ ತೀರ್ಪನ್ನು ಎಲ್ಲಾ ಪ್ರಕರಣಗಳಿಗೂ ಅನ್ವಯಿಸಲೂ ಬಾರದು. ಪ್ರಕರಣದಿಂದ ಪ್ರಕರಣಕ್ಕೆ ತೀರ್ಪು ಬೇರೆಯಾಗಿರುತ್ತದೆ. ವೈವಾಹಿಕ ಜೀವನ ಮರುಸ್ಥಾಪನೆಗೆ ಪತ್ನಿ ನಿರಾಕರಿಸಿದರೆ ಜೀವನಾಂಶದಿಂದ ವಂಚಿತರಾಗುತ್ತಾರೆ ಎಂಬ ತೀರ್ಪುಗಳನ್ನು ಹಲವು ಹೈಕೋರ್ಟ್‌ಗಳು ನೀಡಿವೆ. ಆದರೆ ಈ ಕುರಿತು ಸ್ಪಷ್ಟವಾದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ಇಂಥ ಹಲವು ಪ್ರಕರಣಗಳಲ್ಲಿ ಹೈಕೋರ್ಟ್‌ ಹೊರಡಿಸಿರುವ ತೀರ್ಪುಗಳನ್ನು ವಿಶ್ಲೇಷಿಸಿದ ಸುಪ್ರೀಂ ಕೋರ್ಟ್‌ನ ಪೀಠವು, ಪತ್ನಿಯ ಜೀವನಾಂಶ ತೀರ್ಪನ್ನು ಎತ್ತಿಹಿಡಿಯುವ ಪರವಾಗಿಯೇ ನ್ಯಾಯಾಂಗದ ಆಲೋಚನೆ ಇರುತ್ತದೆ ಎಂದಿದೆ. ಪತಿಯ ಆಜ್ಞೆ ಮೇರೆಗೆ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ಒಪ್ಪಿಕೊಂಡು, ಪತ್ನಿ ಅದನ್ನು ಅನುಸರಿಸಲು ನಿರಾಕರಿಸಿದರಷ್ಟೇ ಜೀವನಾಂಶ ಪಾವತಿಯಿಂದ ವಿನಾಯಿತಿ ಸಿಗಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಜಾರ್ಖಂಡ್‌ನ ದಂಪತಿಯ ಪ್ರಕರಣದ ವಿಚಾರಣೆ ನಡೆಸಿದ ಪೀಠವು ಈ ಅಭಿಪ್ರಾಯಪಟ್ಟಿತು. 2015ರ ಆ. 21ರಂದು ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಆಕೆಯನ್ನು ಪತಿ ಮನೆಗೆ ಕರೆತರುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ ಎಂದು ದೂರಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಪತ್ನಿ, '₹5ಲಕ್ಷ ವರದಕ್ಷಿಣೆ ಹಾಗೂ ಕಾರು ನೀಡುವಂತೆ ಪೀಡಿಸಿ ಪತಿಯ ಮನೆಯಲ್ಲಿ ಹಿಂಸೆ ಹಾಗೂ ಮಾನಸಿಕ ಸಂಕಟ ನೀಡಲಾಗುತ್ತಿತ್ತು. ಜತೆಗೆ ಪತಿಗೆ ಬಾಹ್ಯ ಸಂಬಂಧವೂ ಇದೆ. ತನಗೆ ಗರ್ಭಪಾತವೂ ಆಗಿದೆ. ಆದರೂ ನನ್ನ ಯೋಗಕ್ಷೇಮ ವಿಚಾರಿಸಿಲ್ಲ' ಎಂದು ದೂರಿದ್ದರು.

'ನನಗೆ ಪ್ರತ್ಯೇಕ ಶೌಚಗೃಹ ನೀಡುವುದಾದರೆ ಮತ್ತು ತನ್ನ ಆಹಾರ ಸಿದ್ಧಪಡಿಸಲು ಎಲ್‌ಪಿಜಿ ಒಲೆ ನೀಡುವುದಾದರೆ ಪತಿಯ ಮನೆಗೆ ಮರಳಲು ಸಿದ್ಧ' ಎಂದಿದ್ದರು.

ವೈವಾಹಿಕ ಜೀವನವನ್ನು ಮರುಸ್ಥಾಪಿಸುವ ಉದ್ದೇಶದಿಂದ ಪತಿಯ ಮನೆಗೆ ಮರಳುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಇದನ್ನು ತಿರಸ್ಕರಿಸಿದ್ದ ಮಹಿಳೆ, ತನಗೆ ಮಾಸಿಕ ₹10 ಸಾವಿರ ಜೀವನಾಂಶ ಕೊಡಿಸುವಂತೆ ಕೋರಿದ್ದರು.

ಮಹಿಳೆಯ ಪತಿಯು ಇದನ್ನು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಒಟ್ಟಿಗೆ ಬಾಳುವ ಆದೇಶವಿದ್ದರೂ, ಅದನ್ನು ಪಾಲಿಸದ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries