ನವದೆಹಲಿ: ರಷ್ಯಾ ಸೇನೆ ನೇಮಕ ಮಾಡಿಕೊಂಡಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡುವಂತೆ ರಷ್ಯಾ ಸರ್ಕಾರವನ್ನು ಭಾರತ ಮಂಗಳವಾರ ಒತ್ತಾಯಿಸಿದೆ.
ರಷ್ಯಾ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳದ ತ್ರಿಶ್ಶೂರಿನ ಬಿನಿಲ್ ಟಿ.ಬಿ ಮೃತಪಟ್ಟ ಬೆನ್ನಲ್ಲೇ, ಭಾರತದಿಂದ ಈ ಒತ್ತಾಯ ಕೇಳಿಬಂದಿದೆ.
ಬಿನಿಲ್ ಸಾವಿನೊಂದಿಗೆ, ರಷ್ಯಾ-ಉಕ್ರೇನ್ ಯುದ್ಧದ ವೇಳೆ ಮೃತಪಟ್ಟ ಭಾರತೀಯರ ಸಂಖ್ಯೆ 10ಕ್ಕೆ ಏರಿದಂತಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್, 'ಕೇರಳದ ಬಿನಿಲ್ ಅವರು ಮೃತಪಟ್ಟರೆ, ಮತ್ತೊಬ್ಬ ಭಾರತೀಯ ಗಾಯಗೊಂಡಿದ್ದು, ಮಾಸ್ಕೊದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
'ಈ ವಿಚಾರವನ್ನು ರಷ್ಯಾ ಅಧಿಕಾರಿಗಳು ಹಾಗೂ ನವದೆಹಲಿಯಲ್ಲಿರುವ ರಷ್ಯಾ ರಾಯಭಾರ ಕಚೇರಿ ಗಮನಕ್ಕೆ ತರಲಾಗಿದೆ. ಉಳಿದ ಭಾರತೀಯ ಪ್ರಜೆಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇವೆ' ಎಂದು ಹೇಳಿದ್ದಾರೆ.

