ತಿರುವನಂತಪುರಂ: ಶರೋನ್ ಕೊಲೆ ಪ್ರಕರಣದ ತನಿಖಾ ತಂಡದ ನೇತೃತ್ವ ವಹಿಸಿದ್ದ ಅಧಿಕಾರಿ ಶಿಲ್ಪಾ ಐಎಎಸ್, ಆರೋಪಿ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಇದು ಸಾಮೂಹಿಕ ತನಿಖೆಯ ತೀರ್ಪು ಮತ್ತು ವಿಶೇಷ ತನಿಖಾ ತಂಡದ ರಚನೆಯ ನಂತರ ನಡೆದ ಪ್ರಾಮಾಣಿಕ ತನಿಖೆ ಮತ್ತು ನಿಕಟ ವೀಕ್ಷಣೆಯ ಫಲಿತಾಂಶವಾಗಿದೆ ಎಂದು ಅಧಿಕಾರಿ ಹೇಳಿದರು.
"ನಮಗೆ ತುಂಬಾ ಸಂತೋಷವಾಗಿದೆ. ಇಂತಹ ತೀರ್ಪಿನಿಂದ ನನಗೆ ಹೆಮ್ಮೆ ಇದೆ. ತನಿಖೆಯಲ್ಲಿ ನಮಗೆ ಹಲವು ಸವಾಲುಗಳು ಎದುರಾಗಿದ್ದವು. ಗ್ರೀಷ್ಮಾ ತನಿಖಾ ತಂಡವನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದರು. ತನಿಖೆಯಲ್ಲಿನ ದೊಡ್ಡ ಸವಾಲೆಂದರೆ ಪ್ರಕರಣವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿರುವುದುದು. ಗ್ರೀಷ್ಮಾ ಅಪರಾಧವನ್ನು ಕೊನೆಗೂ ಒಪ್ಪಿಕೊಂಡಳು. ಎಲ್ಲಾ ಪುರಾವೆಗಳು ದೊರೆತ ನಂತರ ವಿಚಾರಣೆ ನಡೆಸಲಾಗಿತ್ತು” ಎಂದು ಅಧಿಕಾರಿ ಶಿಲ್ಪಾ ಹೇಳಿದರು.
ಇದು ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಗಮನಿಸಿದೆ ಮತ್ತು ಗರಿಷ್ಠ ಶಿಕ್ಷೆಯನ್ನು ನಿರೀಕ್ಷಿಸಲಾಗಿತ್ತೆಂದು ತನಿಖಾ ಅಧಿಕಾರಿ ಹೇಳಿದರು. ತನಿಖಾ ತಂಡವು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವುದರಲ್ಲಿ ಮಾತ್ರವಲ್ಲದೆ, ಈ ಅಪರಾಧವನ್ನು ಹಂತ ಹಂತವಾಗಿ ಪರಿಶೀಲಿಸುವಲ್ಲಿಯೂ ಯಶಸ್ವಿಯಾಗಿದೆ. ಹಗಲು ರಾತ್ರಿ ಓಡಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು.
ಆಸ್ಪತ್ರೆಯ ಹಾಸಿಗೆಯಲ್ಲಿಯೂ ಸಹ ಶರೋನ್ ಜೊತೆ ಗ್ರೀಷ್ಮಾ ಪ್ರೀತಿಯಿಂದ ಮಾತನಾಡಿದ್ದಳು. ಗ್ರೀಷ್ಮಾ ಒಬ್ಬ ಅಪರಾಧಿ ಮಾಡುವಂತೆ ಎಲ್ಲವನ್ನೂ ಯೋಜಿತ ರೀತಿಯಲ್ಲಿ ಮಾಡಿದಳು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದರೂ ಸಹ ಶರೋನ್ ಗ್ರೀಷ್ಮಾಳನ್ನು ತಿರಸ್ಕರಿಸಲು ಸಿದ್ಧರಿರಲಿಲ್ಲ. ಗ್ರೀಷ್ಮಾ ಶರೋನ್ ನನ್ನು ದಾರಿ ತಪ್ಪಿಸುವಂತೆ ವರ್ತಿಸಿದ್ದಳು. ಚಿಕ್ಕ ವಯಸ್ಸಿನ ಕಾರಣ ಕ್ರೂರ ಕೊಲೆಯನ್ನು ಸಮರ್ಥಿಸಲಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.





