ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸ್ವಚ್ಛತಾ ಕಾರ್ಯ ಸೇವೆಗೆ ನಿಯೋಜಿತವಾಗಿರುವ ಕಾರ್ಮಿಕರಿಗೆ ಬಿಜೆಪಿ ನಾಯಕರು ಶುಕ್ರವಾರ 'ಸಂವಿಧಾನದ ಪ್ರತಿ' ವಿತರಿಸಿದ್ದಾರೆ.
ಪರಿಶಿಷ್ಟರು, ಒಬಿಸಿ ವರ್ಗದವರಿಗೆ ಮೀಸಲಾತಿ ಸೌಲಭ್ಯ ರದ್ದತಿಗೆ ಯತ್ನ ನಡೆದಿದೆ ಎಂಬ ಪ್ರತಿಪಕ್ಷಗಳ ಟೀಕೆಯ ತೀಕ್ಷತೆ ತಗ್ಗಿಸುವುದು, ಪಕ್ಷ ಸಂವಿಧಾನಕ್ಕೆ ಬದ್ಧವಾಗಿದೆ ಎಂಬ ಸಂದೇಶ ರವಾನಿಸುವುದು ಇದರ ಗುರಿ ಎನ್ನಲಾಗಿದೆ.
ಮಹಾಕುಂಭದಲ್ಲಿ ಸಮಾಜವಾದಿ ಪಕ್ಷವು ಶಿಬಿರ ಸ್ಥಳದಲ್ಲಿ, ಆ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಅವರ ಪ್ರತಿಮೆ ಸ್ಥಾಪಿಸಿದ ಹಿಂದೆಯೇ, ಬಿಜೆಪಿಯು ಸಂವಿಧಾನದ ಪ್ರತಿ ವಿತರಿಸಲು ಮುಂದಾಗಿದೆ.
ಕುಂಭಮೇಳದಲ್ಲಿ ಕರ್ತವ್ಯದಲ್ಲಿರುವ ಸಾವಿರಾರು ಸ್ವಚ್ಛತಾ ಕಾರ್ಮಿಕರಿಗೆ ಬಿಜೆಪಿ ನಾಯಕರು ಸಂವಿಧಾನ ಪ್ರತಿ ವಿತರಿಸಿದರು. ಮೀಸಲಾತಿ ರದ್ದತಿಗೆ ಯತ್ನ ಕುರಿತಂತೆ ಬಿಜೆಪಿ ವಿರುದ್ದ ನಡೆಯುತ್ತಿರುವ ಅಪಪ್ರಚಾರ ತಗ್ಗಿಸುವುದು ಇದರ ಉದ್ದೇಶ ಎಂದರು.
ಸಂವಿಧಾನ ರಚನೆಯಾಗಿ 75 ವರ್ಷವಾದ ಹಿನ್ನೆಲೆಯಲ್ಲಿ ಬಿಜೆಪಿಯು ಈಗಾಗಲೇ 'ಸಂವಿಧಾನ ಗೌರವ ಅಭಿಯಾನ'ವನ್ನು ಹಮ್ಮಿಕೊಂಡಿದೆ. 'ವೋಟ್ ಬ್ಯಾಂಕ್ ಎಂದೇ ಪರಿಗಣಿತವಾಗಿರುವ ಸಮುದಾಯದ ಜನರನ್ನು ಗೌರವಿಸಲು ನಾವು ಇಲ್ಲಿಗೆ ಬಂದಿದ್ದೇವೆ' ಎಂದು ಈ ಸಂದರ್ಭದಲ್ಲಿ ಮುಖಂಡರು ಹೇಳಿದರು.





