ನವದೆಹಲಿ: ಭಾರತೀಯ ನೌಕಾಪಡೆಯ ಅಧಿಕಾರಿಗಳಾದ ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ ಹಾಗೂ ರೂಪಾ ಎ, ಪೆಸಿಫಿಕ್ ಸಾಗರದ ದಕ್ಷಿಣದಲ್ಲಿನ 'ಪಾಯಿಂಟ್ ನೆಮೊ' ಅನ್ನು ಗುರುವಾರ ದಾಟುವ ಮೂಲಕ ಗಮನ ಸೆಳೆದಿದ್ದಾರೆ.
ಇದು ಭೂಮಿಯ ದಕ್ಷಿಣ ಗೋಳಾರ್ಧದಲ್ಲಿರುವ ಅತ್ಯಂತ ದೂರದ ಸ್ಥಳವಾಗಿದೆ.
'ನಾವಿಕ ಸಾಗರ ಪರಿಕ್ರಮ-2' ಭಾಗವಾಗಿ ಈ ಇಬ್ಬರು ಮಹಿಳಾ ಅಧಿಕಾರಿಗಳು ನೌಕೆ 'ಐಎನ್‌ಎಸ್ ತಾರಿಣಿ'ಯಲ್ಲಿ ಪರ್ಯಟನೆ ಕೈಗೊಂಡಿದ್ದಾರೆ. ನ್ಯೂಜಿಲೆಂಡ್‌ನ ಲಿಟೆಲ್ಟನ್‌ನಿಂದ ಫಾಕ್‌ಲ್ಯಾಂಡ್ ದ್ವೀಪಗಳಲ್ಲಿನ ಪೋರ್ಟ್ ಸ್ಟ್ಯಾನ್ಲೆಗೆ ಸಾಗುವ ವೇಳೆ, ಜನವರಿ 30ರಂದು ರಾತ್ರಿ 12.30ಕ್ಕೆ ಇವರು 'ಪಾಯಿಂಟ್ ನೆಮೊ' ವನ್ನು ಯಶಸ್ವಿಯಾಗಿ ದಾಟಿದರು' ಎಂದು ನೌಕಾಪಡೆ ವಕ್ತಾರ ತಿಳಿಸಿದ್ದಾರೆ.
ಇವರು 'ಪಾಯಿಂಟ್ ನೆಮೊ'ದಲ್ಲಿನ ನೀರಿನ ಮಾದರಿಗಳನ್ಗು ಸಂಗ್ರಹಿಸಿದ್ದಾರೆ. ಇವುಗಳನ್ನು ಗೋವಾದಲ್ಲಿರುವ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಕಡಲಲ್ಲಿರುವ ಜೀವವೈವಿಧ್ಯ, ಪಾಯಿಂಟ್ ನೆಮೊ ಪ್ರದೇಶದಲ್ಲಿನ ರಾಸಾಯನಿಕ ಸಂಯೋಜನೆ ಸೇರಿದಂತೆ ಸಾಗರ ಪರಿಸರ ಕುರಿತು ಈ ಮಾದರಿಗಳು ಮಹತ್ವದ ಒಳನೋಟ ನೀಡುವ ನಿರೀಕ್ಷೆ ಇದೆ.
ದಿಲ್ನಾ ಹಾಗೂ ರೂಪಾ ಅವರು ಕಳೆದ ವರ್ಷ ಅಕ್ಟೋಬರ್ 2ರಂದು ಈ ಪರ್ಯಟನೆ ಆರಂಭಿಸಿದ್ದು, ಮೇ ವೇಳೆಗೆ ಗೋವಾಕ್ಕೆ ಮರಳುವರು.
ಇದು, ಭಾರತೀಯ ನೌಕಾಪಡೆಯು ಮಹಿಳಾ ಅಧಿಕಾರಿಗಳೇ ಇರುವ ತಂಡ ಕೈಗೊಂಡಿರುವ ಎರಡನೇ ಭೂಪ್ರದಕ್ಷಿಣೆಯಾಗಿದೆ. ಮೊದಲ ಪರ್ಯಟನೆಗೂ ಐಎನ್‌ಎಸ್ ತಾರಿಣಿ ಬಳಸಲಾಗಿತ್ತು.

ನೌಕಾಪಡೆ ಲೆಫ್ಟಿನೆಂಟ್ ಕಮಾಂಡರ್‌ಗಳಾದ ದಿಲ್ನಾ ಕೆ ಹಾಗೂ ರೂಪಾ ಎ ಅವರು 'ಐಎನ್‌ಎಸ್ ತಾರಿಣಿ'ಯಲ್ಲಿ ಕೈಗೊಂಡಿರುವ ಭೂಪ್ರದಕ್ಷಿಣೆ ಭಾಗವಾಗಿ ಗುರುವಾರ ಪೆಸಿಫಿಕ್ ಸಾಗರದ ದಕ್ಷಿಣದಲ್ಲಿರುವ 'ಪಾಯಿಂಟ್ ನೆಮೊ' ದಾಟಿದರು
ನಿಷ್ಕ್ರಿಯ ಗಗನನೌಕೆಗಳ ಸ್ಮಶಾನ'!
'ಪಾಯಿಂಟ್ ನೆಮೊ'ವನ್ನು 'ಭೂಮಿಯ ಅತ್ಯಂತ ದೂರದ ಜಾಗ' ಎಂದು ಕರೆಯಲಾಗುತ್ತದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ಧಾಣ (ಐಎಸ್‌ಎಸ್) ಪರಿಭ್ರಮಿಸುವ ವೇಳೆ 'ಪಾಯಿಂಟ್ ನೆಮೊ' ಹತ್ತಿರದಲ್ಲಿರುತ್ತದೆ. ಹೀಗಾಗಿ ಐಎಸ್‌ಎಸ್‌ನಲ್ಲಿರುವ ಗಗನಯಾನಿಗಳೇ 'ಪಾಯಿಂಟ್ ನೆಮೊ'ಗೆ ಕೆಲವೊಮ್ಮೆ ಹತ್ತಿರದ ಮಾನವನ ಉಪಸ್ಥಿತಿಗೆ ಸಾಕ್ಷಿಯಾಗುತ್ತಾರೆ. ನಿಷ್ಕ್ರಿಯಗೊಂಡ ಗಗನನೌಕೆಗಳನ್ನು ಇದೇ ಸ್ಥಳದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇದೇ ಕಾರಣಕ್ಕೆ ಈ ಸ್ಥಳವನ್ನು 'ನಿಷ್ಕ್ರಿಯಗೊಂಡ ಗಗನನೌಕೆಗಳ ಸ್ಮಶಾನ' ಎಂದೂ ಕರೆಯಲಾಗುತ್ತದೆ.




