ನವದೆಹಲಿ: ಪೂರ್ವ ಲಡಾಖ್ ಭಾಗದ ಗಡಿ ನಿಯಂತ್ರಣಾ ರೇಖೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದರೂ ಸ್ಥಿರವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸೋಮವಾರ ಹೇಳಿದ್ದಾರೆ.
ಸೇನಾ ದಿನಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಚೀನಾ ಗಡಿಯಲ್ಲಿ ಇನ್ನೂ ಬಿಕ್ಕಟ್ಟಿನ ಸ್ಥಿತಿಯಿದೆ.
ಎರಡೂ ಮಿಲಿಟರಿಗಳ ನಡುವೆ ನಂಬಿಕೆ ಮರುಸ್ಥಾಪನೆಗೆ ಇನ್ನಷ್ಟು ಪ್ರಯತ್ನ ಬೇಕಿದೆ. ಸದ್ಯ ಗಡಿಯಲ್ಲಿ ನಿರ್ಲಿಪ್ತ ವಾತಾವರಣವಿದೆ ಎಂದರು.
ಜನವರಿ 15 ರಂದು ಪ್ರತಿ ವರ್ಷ ಸೇನಾ ದಿನ ಆಚರಣೆ ಮಾಡಲಾಗುತ್ತದೆ.
ದೆಪಸಂಗ್ ಮತ್ತು ಡೆಮ್‌ಚೊಕ್ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಗಸ್ತು ತಿರುಗಾಟ ಆರಂಭವಾಗಿದೆ. ಯಾವುದೇ ರೀತಿಯ ಸಂದರ್ಭವನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ. ಗಡಿಯಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಡುತ್ತಿದ್ದೇವೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕದನ ವಿರಾಮ ಒಪ್ಪಂದಕ್ಕೆ ಪಾಕಿಸ್ತಾನ ಸೇನೆ ಒಪ್ಪಿಗೆ ನೀಡಿದೆ. ಕಳೆದ ವರ್ಷ ಪಾಕಿಸ್ತಾನ ಮೂಲದ ಶೇ 60ರಷ್ಟು ಉಗ್ರರನ್ನು ಸದೆಬಡಿಯಲಾಗಿದೆ ಎಂದರು.
ಸಂಘರ್ಷ ಪೀಡಿತ ಮಣಿಪುರದಲ್ಲಿ ಭದ್ರತಾ ಪಡೆಗಳ ಪ್ರಯತ್ನ ಮತ್ತು ರಾಜ್ಯ ಸರ್ಕಾರದ ಕ್ರಮಗಳಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದರೂ ಆಗಾಗ ಗಲಭೆಗಳು ನಡೆಯುತ್ತಿದ್ದು, ಅದನ್ನು ನಿಯಂತ್ರಿಸಿ ಶಾಂತಿ ಸ್ಥಾಪಿಸಲು ಸೇನೆ ಯತ್ನಿಸುತ್ತಿದೆ ಎಂದರು.




