ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಕೇರಳದ ಸಂಚಾಲಕರಾಗಿ ಪಿವಿ ಅನ್ವರ್ ಅವರನ್ನು ನೇಮಕ ಮಾಡಿದೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ತೃಣಮೂಲ ಕಾಂಗ್ರೆಸ್ ಅಧಿಕೃತ ಘೋಷಣೆ ಹೊರಬಿದ್ದಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಸೂಚನೆ ಮೇರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅನ್ವರ್ ತಿಳಿಸಿದ್ದರು. ಅನ್ವರ್ ಅವರು ಇಂದು ಬೆಳಗ್ಗೆ ವಿಧಾನ ಸಭಾಧ್ಯಕ್ಷರ ಕೊಠಡಿಗೆ ತೆರಳಿ ರಾಜೀನಾಮೆ ಪತ್ರ ನೀಡಿದರು. ಅನ್ವರ್‌ಗೆ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸ್ಥಾನ ನೀಡುವ ಸೂಚನೆಗಳೂ ಇವೆ. ಇದೇ ವೇಳೆ ಪಿವಿ ಅನ್ವರ್ ನಿಲಂಬೂರಿನಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಯುಡಿಎಫ್ ಕಣಕ್ಕಿಳಿಸುವ ಕಾಂಗ್ರೆಸ್ ಅಭ್ಯರ್ಥಿಗೆ ಬೇಷರತ್ ಬೆಂಬಲ ನೀಡಲು ನಿರ್ಧರಿಸಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಿರುವನಂತಪುರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಿವಿ ಅನ್ವರ್ ಅವರು ನಿಲಂಬೂರಿನಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು.




