ಜಲಗಾಂವ್: ಜಲಗಾಂವ್ ರೈಲು ಅಪಘಾತದಲ್ಲಿ ಮೃತಪಟ್ಟ 13 ಜನರ ಪೈಕಿ ಒಬ್ಬ ಬಾಲಕ, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ನೇಪಾಳದವರು ಎಂದು ಗುರುತಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಕಮಲ ನವೀನ್ ಭಂಡಾರಿ(43), ಜವಕಲಾ ಭಾಟೆ (60), ಲಚ್ಚಿರಾಮ್ ಖತರು ಪಾಸಿ (40) ಮತ್ತು ಇಮ್ತಿಯಾಜ್ ಅಲಿ (11) ಎಂದು ಗುರುತಿಸಲಾಗಿದೆ ಎಂದು ಜಲಗಾಂವ್ ಜಿಲ್ಲಾ ಮಾಹಿತಿ ಅಧಿಕಾರಿ ಯುವರಾಜ್ ಪಾಟೀಲ್ ಹೇಳಿದ್ದಾರೆ.
ಇನ್ನು, ಗಾಯಗೊಂಡ 10 ಮಂದಿಯಲ್ಲಿ ಒಂಭತ್ತು ಮಂದಿ ಪಚೋರಾ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬಾತ ಜಲಗಾಂವ್ ನಗರ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಣ್ಣ ಪುಟ್ಟ ಗಾಯಗೊಂಡವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.
ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ನಂಬಿ ಲಖನೌ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಹಲವರು ರೈಲಿನಿಂದ ಕೆಳಗಿಳಿದು ಓಡಿಹೋಗಿದ್ದು, ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 13 ಮಂದಿ ಮೃತಪಟ್ಟಿದ್ದಾರೆ.





