ವಾಷಿಂಗ್ಟನ್: ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಟಿಕ್ ಟಾಕ್ ಅಮೆರಿಕದಲ್ಲಿ ಕಾರ್ಯ ನಿಲ್ಲಿಸಿದೆ. ಈ ಮೂಲಕ ಭಾರತದ ನಂತರ ಅಮೆರಿಕದಲ್ಲೂ ಟಿಕ್ ಟಾಕ್ ಆಯಪ್ ನಿಷೇಧಿಸಲಾಗಿದೆ.
ಭಾನುವಾರ ಆಯಪಲ್ ಮತ್ತು ಗೂಗಲ್ ಪ್ಲೇಸ್ಟೋರ್‌ನಿಂದ ಆಯಪ್ ಕಾಣೆಯಾಗಿದೆ. ಅಮೆರಿಕದಲ್ಲಿ ಸುಮಾರು 170 ಮಿಲಿಯನ್ ಜನರು ಟಿಕ್ ಟಾಕ್ ಆಯಪ್ ಬಳಕೆ ಮಾಡುತ್ತಿದ್ದರು.
ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಅಧಿಕಾರವಹಿಸಿಕೊಳ್ಳಲಿದ್ದು, ನಿಷೇಧಗೊಂಡ ಟಿಕ್ ಟಾಕ್ ಆಯಪ್ 90 ದಿನಗಳವರೆಗೆ ಬಳಕೆಗೆ ಸಿಗುವಂತೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಭದ್ರತೆಗೆ ಟಿಕ್‌ಟಾಕ್ ಆಯಪ್ ಧಕ್ಕೆಯುಂಟು ಮಾಡುತ್ತಿದೆ ಎಂದು ಭದ್ರತಾ ಏಜೆನ್ಸಿಗಳು ಹೇಳಿದೆ. ಹೀಗಾಗಿ ಆಯಪ್ ಬಳಕೆಗೆ ನಿಷೇಧ ಹೇರಲಾಗಿದೆ.
ಶನಿವಾರ ರಾತ್ರಿ ಹೊತ್ತಿಗೆ ಟಿಕ್ ಟಾಕ್ ಆಯಪ್ ತೆರೆದಾಗ 'ದುರದೃಷ್ಟವಶಾತ್ ಅಮೆರಿಕದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ, ಇದರರ್ಥ ನೀವು ಸದ್ಯಕ್ಕೆ ಟಿಕ್ ಟಾಕ್ ಅನ್ನು ಬಳಸಲಾಗುವುದಿಲ್ಲ. ಟಿಕ್ ಟಾಕ್ ಅನ್ನು ಮರುಸ್ಥಾಪಿಸಲು ನಮ್ಮೊಂದಿಗೆ ಕೆಲಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ನಂತರ ದಯವಿಟ್ಟು ಟ್ಯೂನ್ ಮಾಡಿ' ಎನ್ನುವ ಸಂದೇಶ ಬಳಕೆದಾರರಿಗೆ ಕಾಣಿಸಿದೆ.




