ಡೇರ್ ಅಲ್ ಬಾಲಾ : ಊರು ಸೇರುವ ತವಕ, ಮುಖದಲ್ಲಿ ಅತೀವ ಸಂತಸ, ತಮ್ಮ ಬಳಿ ಅಳಿದು ಉಳಿದ ವಸ್ತುಗಳನ್ನು ಸುತ್ತಿಕೊಂಡು, ಕುಟುಂಬದವರೊಂದಿಗೆ ಕಾಲ್ನಡಿಗೆಯಲ್ಲಿ ಪ್ಯಾಲೆಸ್ಟೀನ್‌ನ ಸಾವಿರಾರು ಜನರು ನೆಟ್‌ಜರಿಮ್ ಕಾರಿಡಾರ್ ಮೂಲಕ ಉತ್ತರ ಗಾಜಾವನ್ನು ತಲುಪುತ್ತಿದ್ದಾರೆ.
ದಕ್ಷಿಣ ಗಾಜಾದ ಭಾಗಗಳಲ್ಲಿ ವಿವಿಧ ನಿರಾಶ್ರಿತರ ಶಿಬಿರಗಳಲ್ಲಿ ಉಳಿದುಕೊಂಡಿದ್ದ ಜನರು ಭಾನುವಾರದ ಹೊತ್ತಿಗೆ ನೆಟ್‌ಜರಿಮ್ ಕಾರಿಡಾರ್ ಬಳಿ ಜಮಾಯಿಸಲು ಶುರುವಿಟ್ಟಿದ್ದರು. ಆದರೆ, ಗಾಜಾ ಗಡಿಯನ್ನು ಇಸ್ರೇಲ್ ತೆರದಿರಲಿಲ್ಲ. ರಾತ್ರಿ ಇಡೀ ಕೊರೆಯುವ ಚಳಿಯಲ್ಲಿಯೇ ಗಾಜಾ ಜನರು ಕಾದು ಕುಳಿತಿದ್ದರು.
ಹಮಾಸ್ ಬಂಡುಕೋರ ಸಂಘಟನೆಯು ಒಪ್ಪಂದದಂತೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಇಸ್ರೇಲ್ ಆರೋಪಿಸಿತ್ತು. ಒಂದೇ ರಾತ್ರಿಯಲ್ಲಿ ಈ ಸಮಸ್ಯೆಯನ್ನು ಮಧ್ಯವರ್ತಿಗಳು ನಿವಾರಿಸಿದ್ದಾರೆ. ಈ ಕಾರಣದಿಂದ ಸೋಮವಾರ ಬೆಳಿಗ್ಗೆ 7ರ ಸುಮಾರಿಗೆ ಯಾವುದೇ ಪರಿಶೀಲನೆ ಇಲ್ಲದೆ ಗಾಜಾ ಜನರು ತಮ್ಮ ಊರು ಸೇರುತ್ತಿದ್ದಾರೆ.
15 ತಿಂಗಳ ಸುದೀರ್ಘ ಯುದ್ಧವು ಉತ್ತರ ಗಾಜಾವನ್ನು ಸಂಪೂರ್ಣವಾಗಿ ನಾಶ ಮಾಡಿದೆ. ತಮ್ಮ ಮನೆ ಅಥವಾ ಮನೆಯ ಕುರುಹು ಕೂಡ ಇಲ್ಲ ಎನ್ನುವ ಸತ್ಯ ತಿಳಿದಿದ್ದರೂ ಜನರು ಅತೀವ ಉತ್ಸಾಹದಲ್ಲಿ ಮರಳುತ್ತಿದ್ದಾರೆ.




