ತ್ರಿಶೂರ್: ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಯುಟ್ಯೂಬರ್, ಜೈಲಿನಲ್ಲಿ ಕೂದಲು ಕತ್ತರಿಸಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ. ಕೂಡಲೇ ಆತನನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
'ಮನವಳನ್' ಖ್ಯಾತಿಯ ಯುಟ್ಯೂಬರ್ ಮುಹಮ್ಮದ್ ಶಹೀನ್ ಶಾ, ತ್ರಿಶೂರಿನ ಎರ್ನಾಕುಲಂ ನಿವಾಸಿ.
2024ರ ಏಪ್ರಿಲ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಕಾರು ಚಲಾಯಿಸಲು ಯತ್ನಿಸಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜೈಲಿನ ನಿಯಮದಂತೆ ಆತನಿಗೆ ಕೂದಲು ಕತ್ತರಿಸಲಾಗಿತ್ತು. ನಂತರ ಮಾನಸಿಕವಾಗಿ ಉದ್ವೇಗಕ್ಕೆ ಒಳಗಾದಂತೆ ಕಂಡ ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ನಿಗಾ ಇರಿಸಲಾಗಿದೆ ಎಂದೂ ಹೇಳಿದ್ದಾರೆ.
2024ರ ಏಪ್ರಿಲ್ 19ರಂದು ಪ್ರಕರಣ ನಡೆದಾಗಿನಿಂದ ತಲೆ ಮರೆಸಿಕೊಂಡಿದ್ದ ಶಹೀನ್‌ನನ್ನು, ತ್ರಿಶೂರ್ ಪೊಲೀಸರು ಕರ್ನಾಟಕದ ಕೊಡಗಿನಲ್ಲಿ ಮಂಗಳವಾರ (ಜನವರಿ 21ರಂದು) ಬಂಧಿಸಿದ್ದರು. ಬಳಿಕ, ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




