HEALTH TIPS

Encounter: ತಲೆಗೆ ₹1ಕೋಟಿ ಬಹುಮಾನ ಘೋಷಿಸಲಾಗಿದ್ದ ಕಮಾಂಡರ್‌ ಹತ; ಯಾರು ಈ ಛಲಪತಿ?

 ರಾಯಪುರ: ಛತ್ತೀಸಗಢದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಉನ್ನತ ಕಮಾಂಡರ್‌ ಸೇರಿದಂತೆ 14 ಮಂದಿ ನಕ್ಸಲರು ಮೃತಪಟ್ಟಿದ್ದಾರೆ.

'ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಅತಿ ದೊಡ್ಡಮಟ್ಟದ ಯಶಸ್ಸು ಸಿಕ್ಕಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಮೃತರಲ್ಲಿ ನಕ್ಸಲ್‌ ಸಂಘಟನೆಯಲ್ಲಿ 'ಛಲಪತಿ' ಎಂದೇ ಖ್ಯಾತಿ ಪಡೆದಿದ್ದ ಕಮಾಂಡರ್‌ ಜೈರಾಮ್‌ ಕೂಡ ಮೃತಪಟ್ಟಿದ್ದಾರೆ. ಇವರ ತಲೆಗೆ ಕೇಂದ್ರ, ರಾಜ್ಯ ಸರ್ಕಾರಗಳು ₹1 ಕೋಟಿ ಬಹುಮಾನ ಘೋಷಿಸಿದ್ದವು.

ಛತ್ತೀಸಗಢ- ಒಡಿಶಾ ಗಡಿಭಾಗದಲ್ಲಿರುವ ಗರಿಯಾಬಂದ್‌ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಕ್ಸಲರ ವಿರುದ್ಧ ಸೋಮವಾರದಿಂದಲೇ ಕಾರ್ಯಾಚರಣೆ ನಡೆಸಲಾಗಿತ್ತು. ಸೋಮವಾರವೇ ಇಬ್ಬರು ಮಹಿಳಾ ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದವು. ಮಂಗಳವಾರ ಮತ್ತಷ್ಟು ಮಂದಿಯ ಮೃತದೇಹಗಳು ಸಿಕ್ಕಿವೆ.


ಕಳೆದ 10 ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ನಕ್ಸಲರು ಮೃತಪಟ್ಟಿದ್ದಾರೆ. 2024ರಲ್ಲಿಯೇ 287 ಮಂದಿ ನಕ್ಸಲರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಅಂಕಿಅಂಶ ತಿಳಿಸಿದೆ.

14 ಮಂದಿ ನಕ್ಸಲರ ಸಾವಿನ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್‌ ಶಾ, 'ನಕ್ಸಲಿಸಂಗೆ ದೊಡ್ಡ ಹೊಡೆತ ಬಿದ್ದಿದೆ' ಎಂದಿದ್ದಾರೆ. 2026ರ ಮಾರ್ಚ್‌ ತಿಂಗಳ ಒಳಗಾಗಿ ನಕ್ಸಲ್‌ ಚಟುವಟಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಗುರಿ ನಿಗದಿಪಡಿಸಿರುವ ಅವರು, 'ನಕ್ಸಲ್‌ ಚಟುವಟಿಕೆಯು ಕೊನೆಯುಸಿರೆಳೆಯುತ್ತಿದೆ' ಎಂದು ತಿಳಿಸಿದ್ದಾರೆ.

'ಕಾರ್ಯಾಚರಣೆ ನಡೆದ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕಳುಹಿಸಲಾಗಿದೆ. ಭದ್ರತಾ ಪಡೆಗಳು ಈಗಲೂ ಕಾಡಿನ ಒಳಭಾಗದಲ್ಲಿವೆ' ಎಂದು ಛತ್ತೀಸಗಢ ಮಾವೋವಾದಿ ನಿಗ್ರಹ ಪಡೆಯ ಮುಖ್ಯಸ್ಥ ವಿವೇಕಾನಂದ ಸಿನ್ಹಾ ತಿಳಿಸಿದರು. 

ಯಾರು ಈ ಛಲಪತಿ?

ಹೈದರಾಬಾದ್‌ (ಪ್ರಜಾವಾಣಿ ವಾರ್ತೆ): ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಬಲಿಯಾದ ಕಮಾಂಡರ್‌ ಜೈರಾಮ್‌ (60) ಸಾವನ್ನು ನಕ್ಸಲ್‌ ಚಳವಳಿಗೆ ಉಂಟಾದ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ಸಂಘಟನೆಯಲ್ಲಿ 'ಛಲಪತಿ' ಎಂದೇ ಖ್ಯಾತಿ ಪಡೆದಿದ್ದ ಅವರಿಗೆ 'ಅಪ್ಪಾರಾವ್‌' ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.

ಯುವ ಮಾವೋವಾದಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಹಾಗೂ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಾರಣ ಅವರ ತಲೆಗೆ ಸರ್ಕಾರಗಳು ₹1 ಕೋಟಿ ಬಹುಮಾನ ಘೋಷಿಸಿದ್ದವು.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಜನಿಸಿದ್ದ ಜೈರಾಮ್‌ 27 ವರ್ಷದ ಹಿಂದೆ ಮಾವೋವಾದಿ ಹೋರಾಟಕ್ಕೆ ಇಳಿದಿದ್ದರು. ಆಂಧ್ರ- ಒಡಿಶಾ ಗಡಿಭಾಗದ ಸಂಘಟನೆಯ ಜವಾಬ್ದಾರಿ ವಹಿಸಿದ್ದ ಅವರು ಸಿಪಿಐ ಮಾವೋವಾದಿಯ ಕೇಂದ್ರ ಸಮಿತಿಯ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದರು.

ಈ ಸಮಿತಿಯೇ ಸಂಘಟನೆಯ ಎಲ್ಲ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಘಟಕವೂ ಆಗಿದೆ. ಅವರ ಪತ್ನಿ ಅರುಣಾ ಕೂಡ ಮಾವೋವಾದಿಯಾಗಿ ಗುರುತಿಸಿಕೊಂಡಿದ್ದಾರೆ.

ಕೆಲವು ಸಮಯದ ಹಿಂದೆ ಭದ್ರತಾ ಪಡೆಗಳಿಂದ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ದಾಳಿಗಳಿಗೆ ನಿಖರವಾದ ಯೋಜನೆ ರೂಪಿಸುತ್ತಿದ್ದ ಛಲಪತಿ ಆಂಧ್ರ ಪ್ರದೇಶ ಒಡಿಶಾ ಹಾಗೂ ಛತ್ತೀಸ್‌ಗಢ ಹಲವು ಮಾವೋವಾದಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು' ಎಂದು ನಕ್ಸಲ್‌ ನಿಗ್ರಹ ಪಡೆಯ ಮಾಜಿ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಸೆಲ್ಫಿ ನೀಡಿದ ಸುಳಿವು:

ಕೆಲವು ವರ್ಷಗಳ ಹಿಂದೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದಾಗ ಶಸ್ತ್ರಾಸ್ತ್ರಗಳ ಜೊತೆಗೆ ಸ್ಮಾರ್ಟ್‌ ಫೋನ್ ಸಿಕ್ಕಿತ್ತು. 2018ರಲ್ಲಿ ಪತ್ನಿ ಅರುಣಾಳ ಜೊತೆಗೆ ಛಲಪತಿ ಮೊಬೈಲ್‌ನಲ್ಲಿ ತೆಗೆದುಕೊಂಡಿದ್ದ ಸೆಲ್ಫಿಯಿಂದ ನಕ್ಸಲ್‌ ನಿಗ್ರಹ ಪಡೆಗೆ ಅವರ ಈಚಿನ ಮುಖಚರ್ಯೆಯ ಮಾಹಿತಿ ಸಿಕ್ಕಿತ್ತು. ಅದುವರೆಗೆ ಛಲಪತಿ ಅವರ 1990ರ ದಶಕದ ಹಳೆಯ ಭಾವಚಿತ್ರಗಳೇ ಪೊಲೀಸರ ಬಳಿ ಇದ್ದವು. ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಛಲಪತಿ 10ರಿಂದ 15 ಮಾವೋವಾದಿಗಳ ಭದ್ರತೆಯೊಂದಿಗೆ ಸದಾ ಎ.ಕೆ.-47 ರೈಫಲ್‌ ಹಿಡಿದೇ ತಿರುಗಾಡುತ್ತಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries