ಲಖನೌ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಎಚ್ಚೆತ್ತ ಆಡಳಿತ, ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
ಪ್ರಯಾಗ್ ರಾಜ್ ಮಾತ್ರವಲ್ಲದೆ ಹತ್ತಿರದ ವಾರಾಣಸಿ, ಚಿತ್ರಕೂಟ, ಅಯೋಧ್ಯೆಯಲ್ಲೂ ಭಕ್ತ ಸಾಗರ ಹರಿದು ಬರುತ್ತಿರುವ ಕಾರಣ ದುರ್ಘಟನೆ ನಡೆಯದಂತೆ ತಡೆಯಲು ಅಧಿಕಾರಿಗಳು ಎಚ್ಚರಿಕೆವಹಿಸಿದ್ದಾರೆ.
ಮಹಾಕುಂಭ ನಗರದಲ್ಲಿ ಜಾರಿಯಾದ ಮಾರ್ಗಸೂಚಿಗಳು
ಮಹಾಕುಂಭ ಮೇಳ ನಡೆಯುವಲ್ಲಿ ಆಂಬುಲೆನ್ಸ್ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, 'ನೋ ವೇಹಿಕಲ್ ಝೋನ್' ಎಂದು ಘೋಷಿಸಲಾಗಿದೆ.
ಎಲ್ಲಾ ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಲಾಗಿದೆ
ವಾಹನಗಳ ಸಂಚಾರಕ್ಕೆ 'ಒನ್ ವೇ' ನಿಯಮ ಜಾರಿಗೊಳಿಸಲಾಗಿದ್ದು, ವಾಹನಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ದಾರಿ ಕಲ್ಪಿಸಲಾಗಿದೆ.
ವಿವಿಧ ಪ್ರದೇಶಗಳಿಂದ ಪ್ರಯಾಗ್‌ರಾಜ್‌ಗೆ ಬರುವ ಗಡಿಯಲ್ಲೇ ವಾಹನಗಳನ್ನು ತಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲಾ ಭದ್ರತಾ ಮಾರ್ಗಸೂಚಿಗಳು, ಫೆ. 3ರಂದು ವಸಂತ ಪಂಚಮಿಯ ಮೂರನೇ ಅಮೃತ ಸ್ನಾನದವರೆಗೂ ಜಾರಿಯಲ್ಲಿರಲಿದೆ.
ಜನರ ನಿಯಂತ್ರಣಕ್ಕೆ ಹೆಚ್ಚುವರಿ ಅಧಿಕಾರಿಗಳನ್ನು ಸರ್ಕಾರ ನೇಮಿಸಿದೆ. ರಾಜ್ಯ ಸರ್ಕಾರ ಈಗಾಗಲೇ ಮೇಳದಿಂದ ತೆರಳುವವರಿಗೆ ವಿವಿಧ ಪ್ರದೇಶಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.
ಇದಲ್ಲದೆ, ವಾರಾಣಸಿಯ ರೈಲು ನಿಲ್ದಾಣಗಳಲ್ಲಿ ಜನರಿಗೆ ರಾತ್ರಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಚಿತ್ರಕೂಟದಿಂದ ಬರುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




