ತಿರುವನಂತಪುರಂ: ವನ್ಯಜೀವಿಗಳ ದಾಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ 10 ಕಾರ್ಯಾಚರಣೆಗಳನ್ನು ರೂಪಿಸಿದೆ. ಆನೆ ದಾಳಿಯಿಂದ ಜನರು ನಿರಂತರವಾಗಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯ ಕಾವಿನ ಬಳಿಕ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎಲ್ಲಾ ಅರಣ್ಯ ವಿಭಾಗಗಳಲ್ಲಿ ನಿಯಮಿತ ವನ್ಯಜೀವಿ ವಲಸೆ ಮಾರ್ಗಗಳು ಮತ್ತು ಆನೆ ಹಿಂಡುಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ವನ್ಯಜೀವಿ ಸಂಘರ್ಷಗಳು ಸಂಭವಿಸುವ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸ್ವಯಂಸೇವಕ ಪ್ರತಿಕ್ರಿಯಾ ಪಡೆಗಳನ್ನು ರಚಿಸಲಾಗುವುದು. ವನ್ಯಜೀವಿಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಸೌರ ಬೇಲಿ ನಿರ್ಮಿಸಲಾಗುವುದು.
ವನ್ಯಜೀವಿಗಳ ದಾಳಿಯನ್ನು ತಡೆಗಟ್ಟಲು ಬುಡಕಟ್ಟು ಸಮುದಾಯಗಳ ಸ್ಥಳೀಯ ಜ್ಞಾನವನ್ನು ಬಳಸುವುದು, ಕಾಡಿನಲ್ಲಿ ವನ್ಯಜೀವಿಗಳಿಗೆ ಆಹಾರ ಮತ್ತು ನೀರನ್ನು ಖಚಿತಪಡಿಸಿಕೊಳ್ಳುವುದು ಮತ್ತು ಹಾವು ಕಡಿತÀ ಸಾವುಗಳನ್ನು ತಡೆಗಟ್ಟಲು ವಿಷ-ಪ್ರತಿವಿಷ ಉತ್ಪಾದನೆ ಮತ್ತು ವಿತರಣೆಯನ್ನು ಬಲಪಡಿಸುವುದು ಕ್ರಿಯಾ ಯೋಜನೆಗಳಲ್ಲಿ ಸೇರಿವೆ. ನಿಷ್ಕ್ರಿಯ ಎಸ್ಟೇಟ್‍ಗಳಿಂದ ಗಿಡಗಂಟಿಗಳನ್ನು ತೆಗೆದುಹಾಕಲು ನೋಟಿಸ್ ನೀಡಲಾಗುವುದು.
ಈ ಮಧ್ಯೆ, ಮಾನವ-ಪ್ರಾಣಿ ಸಂಘರ್ಷದ ಹಿನ್ನೆಲೆಯಲ್ಲಿ ವಯನಾಡಿಗೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿ ವಿಪತ್ತು ನಿರ್ವಹಣಾ ಇಲಾಖೆ ಆದೇಶ ಹೊರಡಿಸಿದೆ. ಹಣವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಈ ಹಣವನ್ನು ಅರಣ್ಯ ಗಡಿ ಪ್ರದೇಶಗಳಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಲು ಕೂಡಾ ಬಳಸಬಹುದು.



