ದಾಹೊದ್: ಅನೈತಿಕ ಸಂಬಂಧದ ಶಂಕೆ ಮೇಲೆ ಬುಡಕಟ್ಟು ಸಮುದಾಯದ 35 ವರ್ಷದ ಮಹಿಳೆಯೊಬ್ಬರನ್ನು ಗುಂಪೊಂದು ಬೆತ್ತಲೆಗೊಳಿಸಿ, ಥಳಿಸಿ ಮೆರವಣಿಗೆ ಮಾಡಿದೆ. ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೇಲಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಜ. 28ರಂದು ಈ ಘಟನೆ ನಡೆದಿದೆ. ಸಂತ್ರಸ್ತೆಯ ಮಾವ ಮತ್ತು ಗಂಡನ ಸಹೋದರನ ನೇತೃತ್ವದಲ್ಲೇ ಗುಂಪು ಈ ಕೃತ್ಯ ಎಸಗಿದೆ. ಜ. 29ರಂದು 15 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜದೀಪ್‌ಸಿನ್ಹಾ ಜಾಲಾ ತಿಳಿಸಿದ್ದಾರೆ.
ಬಂಧಿತರಲ್ಲಿ ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಹಾಗೂ ನಾಲ್ವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಇದ್ದಾರೆ. ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ, ಮೋಟರ್ ಬೈಕ್‌ಗೆ ಕಟ್ಟಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ನಂತರ ಆಕೆಯ ಮಾವ, ಆಕೆಯನ್ನು ಮನೆಯೊಳಗೆ ಕೂಡಿ ಹಾಕಿ, ಬೀಗ ಹಾಕಿದ್ದ. ಇದು ಗಮನಕ್ಕೆ ಬಂದ ತಕ್ಷಣವೇ ಸಂತ್ರಸ್ತೆಯನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
'ಇದು ಬಹಳ ದುರದೃಷ್ಟಕರ ಮತ್ತು ನಾಚಿಕೆಗೇಡಿನ ಘಟನೆ. ನಾವು ಈ ಘಟನೆಯ ಬಗ್ಗೆ ಸ್ವಯಂ ಪ್ರೇರಿತವಾಗಿ, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ' ಎಂದು ರಾಜ್ಯ ಸರ್ಕಾರದ ವಕ್ತಾರ ರುಷಿಕೇಶ್ ಪಟೇಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಎಎಪಿ ವಾಗ್ದಾಳಿ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿವೆ.





