ನವದೆಹಲಿ: ಮೂವರನ್ನು ಬಲಿ ತೆಗೆದುಕೊಂಡ 2022ರ ಪಶ್ಚಿಮ ಬಂಗಾಳದ ಭೂಪತಿನಗರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಮುಖ್ಯ ತನಿಖಾಧಿಕಾರಿಯ ನಿರಂತರ ಪ್ರಯತ್ನದ ನಂತರ ಪೂರ್ವ ಮೇದಿನಿಪುರ ಜಿಲ್ಲೆಯ ಭೂಪತಿನಗರದ ನಿವಾಸಿ ಪಚಾನನ್ ಘೋರೈ ಅವರನ್ನು ಬಂಧಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ತನಿಖೆಯ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು ಎಂದು ಅದು ತಿಳಿಸಿದೆ.
2022ರಲ್ಲಿ ರಾಜಕುಮಾರ್ ಮನ್ನಾ ಎಂಬವರ ಮನೆಯಲ್ಲಿ ಅಧಿಕ ತೀವ್ರತೆಯ ಸ್ಫೋಟ ಸಂಭವಿಸಿತ್ತು. ಮಾಲೀಕ ಸ್ಥಳದಲ್ಲೇ ಸಾವಿಗೀಡಾದರೆ, ಬುದ್ಧದೇವ್ ಮನ್ನಾ ಅಲಿಯಾಸ್ ಲಾಲು ಮತ್ತು ವಿಶ್ವಜಿತ್ ಗಯೆನ್ ಅವರಿಗೆ ಗಂಭೀರ ಗಾಯಗಳಾಗಿದ್ದವು, ನಂತರ ಅವರೂ ಮೃತಪಟ್ಟಿದ್ದರು ಎಂದು ಹೇಳಿಕೆ ತಿಳಿಸಿದೆ.
2022ರ ಡಿಸೆಂಬರ್ 20ರಂದು ರಾಜ್ಯ ಪೊಲೀಸರಿಂದ ಎಲ್ಲ ದಾಖಲೆ ಪಡೆದು ತನಿಖೆ ವಹಿಸಿಕೊಂಡ ಎನ್‌ಐಎ, ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡಲು ಕಚ್ಚಾ ಬಾಂಬ್‌ಗಳನ್ನು ತಯಾರಿಸಲು ಸ್ಫೋಟಕಗಳ ಪೂರೈಕೆಗೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯ ಆರೋಪ ಈತನ ಮೇಲಿತ್ತು ಎಂದು ಎನ್‌ಐಎ ಹೇಳಿದೆ.




