ಪೋರ್ಟ್ ಸುಡಾನ್: ಸೇನೆ ಮತ್ತು ಅರೆಸೇನಾ ಪಡೆಯ ನಡುವಿನ ಸಂಘರ್ಷದಿಂದ ಜರ್ಝರಿತಗೊಂಡಿರುವ ಸುಡಾನ್‍ನ ಒಮರ್ಡಮನ್ ನಗರದ ಮಾರುಕಟ್ಟೆಯ ಮೇಲೆ ಶನಿವಾರ ನಡೆದ ಫಿರಂಗಿ ಶೆಲ್ ದಾಳಿಯಲ್ಲಿ 40 ಮಂದಿ ಸಾವನ್ನಪ್ಪಿರುವುದಾಗಿ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಅರೆಸೇನಾ ಪಡೆ `ರ್ಯಾಪಿಡ್ ಸಪೋರ್ಟ್ ಫೋರ್ಸ್(ಆರ್‍ಎಸ್‍ಎಫ್) 2023ರ ಎಪ್ರಿಲ್‍ನಿಂದ ದೇಶದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಸೇನೆಯ ಎದುರು ಯುದ್ಧ ಸಾರಿದೆ. ಈ ಮಾರಣಾಂತಿಕ ಸಂಘರ್ಷದಲ್ಲಿ ಇದುವರೆಗೆ ನೂರಾರು ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ರಾಜಧಾನಿ ಖಾರ್ಟೂಮ್‍ನ ಬಳಿಯಿರುವ ತರಕಾರಿ ಮಾರುಕಟ್ಟೆಯ ಮಧ್ಯಭಾಗಕ್ಕೆ ಫಿರಂಗಿ ಶೆಲ್‍ಗಳು ಅಪ್ಪಳಿಸಿದ್ದರಿಂದ ಅಪಾರ ಪ್ರಮಾಣದಲ್ಲಿ ಮೃತ್ಯು-ನೋವು ವರದಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಖಾರ್ಟೂಮ್ ನಗರದ ಹೊರವಲಯದಲ್ಲಿ ಹಲವು ತಿಂಗಳ ನಿರಂತರ ಸಂಘರ್ಷದ ಬಳಿಕ ಸೇನಾಪಡೆ ಜನವರಿ ತಿಂಗಳಿನಲ್ಲಿ ಖಾರ್ಟೂಮ್‍ನ ಆಯಕಟ್ಟಿನ ನೆಲೆಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸಫಲವಾಗಿದ್ದು ಆರ್‍ಎಸ್‍ಎಫ್ ಪಡೆಯನ್ನು ಅದರ ಭದ್ರಕೋಟೆಯಿಂದ ಹೊರದಬ್ಬಿದೆ. ಇದರಿಂದ ಆಕ್ರೋಶಗೊಂಡಿರುವ ಆರ್‍ಎಸ್‍ಎಫ್ ತೀವ್ರ ಪ್ರತಿದಾಳಿ ನಡೆಸುತ್ತಿರುವುದಾಗಿ ವರದಿಯಾಗಿದೆ.




