ಕೋಲ್ಕತ್ತ: ಪಶ್ಚಿಮ ಬಂಗಾಳದ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರು ಪ್ರಾಯೋಗಿಕ ತರಗತಿಗಾಗಿ ವಿದ್ಯಾರ್ಥಿಯನ್ನು ಮದುವೆಯಾಗುತ್ತಿರುವಂತೆ ತೋರಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಹರಿದಾಡಿತ್ತು.
ಇದರಿಂದ ಮನನೊಂದಿರುವ ಆ ಪ್ರಾಧ್ಯಾಪಕಿ, ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಮೌಲಾನಾ ಅಬುಲ್ ಕಲಾಮ್ ಆಜಾದ್ ತಾಂತ್ರಿಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದಲ್ಲಿ ಈ ಘಟನೆ ನಡೆದಿತ್ತು. ವಿಡಿಯೊ ಹರಿದಾಡುತ್ತಿದ್ದಂತೆ ವಿವಿ ಅಧಿಕಾರಿಗಳು ತನಿಖೆಗೆ ಆದೇಶಿಸಿಸಿದ್ದರು. ಅಲ್ಲದೇ ಪ್ರಾಧ್ಯಾಪಕಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದರು.
ಫೆಬ್ರುವರಿ 1 ರಂದು ಕುಲಸಚಿವರಿಗೆ ಈ ಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿರುವ ಪ್ರಾಧ್ಯಾಪಕಿ ಘಟನೆಯ ನಂತರ ನಡೆದ ವಿದ್ಯಮಾನಗಳು ಮನಸ್ಸಿಗೆ ನೋವುಂಟು ಮಾಡಿವೆ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ಐದು ವರ್ಷ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ.
'ಇದೊಂದು ಮನಸ್ಸಿಗೆ ಸಂಬಂಧಿಸಿದ ವಿಷಯ ವಸ್ತು ಹೊಂದಿರುವ ನಾಟಕದ ದೃಶ್ಯವಾಗಿದೆ. ಪಠ್ಯದ ಭಾಗವಾಗಿ ಈ ಸನ್ನಿವೇಶವನ್ನು ಸೃಷ್ಟಿಲಾಗಿತ್ತೇ ಹೊರತು ಯಾವುದೂ ನಿಜವಲ್ಲ. ಆಂತರಿಕ ದಾಖಲೆಗಾಗಿ ವಿಡಿಯೊವನ್ನು ಚಿತ್ರೀಕರಿಸಲಾಗಿತ್ತು, ಆದರೆ ಅದು ಸೋರಿಕೆಯಾಗಿದೆ' ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಲಸಚಿವರು, ಪ್ರಾಧ್ಯಾಪಕಿ ಮೇಲ್ ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ವಧುವಿನಂತೆ ತಯಾರಾಗಿದ್ದ ಪ್ರಾಧ್ಯಾಪಕಿ ಮತ್ತು ಮನೋವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಹಿಂದೂ-ಬಂಗಾಳಿ ಸಂಪ್ರದಾಯಂತೆ ಮದುವೆ ವಿಧಿಗಳನ್ನು ಮಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿತ್ತು. ಹಣೆಗೆ ಸಿಂಧೂರ ಇಡುವುದು ಮತ್ತು ಪರಸ್ಪರ ಮಾಲೆಯನ್ನು ಹಾಕುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿತ್ತು.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಂತೆ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ವಿಶ್ವವಿದ್ಯಾಲಯ ಮೂವರು ಸದಸ್ಯರ ತಂಡ ರಚಿಸಿ ತನಿಖೆಗೆ ಆದೇಶಿಸಿತ್ತು. ಅಲ್ಲದೆ ಸ್ಪಷ್ಟನೆ ನೀಡುವಂತೆ ಪ್ರಾಧ್ಯಾಪಕಿಗೆ ಸೂಚಿಸಿತ್ತು.
ಘಟನೆಯ ತನಿಖೆ ಮುಗಿಯುವವರೆಗೆ ಪ್ರಾಧ್ಯಾಪಕಿಗೆ ರಜೆಯ ಮೇಲೆ ತೆರಳುವಂತೆ ಹಾಗೂ ವಿದ್ಯಾರ್ಥಿಗೆ ತರಗತಿಗೆ ಹಾಜರಾಗದಂತೆ ವಿವಿ ಅಧಿಕಾರಿಗಳು ಸೂಚಿಸಿದ್ದಾರೆ.




.jpg)
