ಇಂದು ಶಾಲಾ ಮಕ್ಕಳಿಗೆ ಶಾಲೆಯೊಂದೆ ಪಾಠದ ಸ್ಥಳವಾಗಿ ಉಳಿದಿಲ್ಲ. ಬದಲಿಗೆ ಮನೆ ಕೂಡ ಈಗ ಪಾಠ ಹೇಳಿಕೊಡುವ ಎರಡನೇ ಮನೆಯಾಗಿದೆ. ಯಾಕಂದ್ರೆ ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದಾಗಲು ಪೋಷಕರು ಪುಸ್ತಕ ನೀಡಿ ಬರೆಯಲು ಓದಲು ಹೇಳುವುದು ನಾವು ನೋಡಬಹುದು. ಇದು ಕೆಟ್ಟ ಅಭ್ಯಾಸ ಅಲ್ಲವೇ ಅಲ್ಲ. ಮಕ್ಕಳು ಓದುವ ಸಮಯದಲ್ಲಿ ಓದದೇ ಇದ್ದರೆ ಅವರು ಓದಿನಲ್ಲಿ ಹಿಂದುಳಿಯುವ ಸಾಧ್ಯತೆ ಕೂಡ ಇರಲಿದೆ.
ಆದ್ರೆ ಮಕ್ಕಳಿಗೆ ಇದೊಂದು ಹೊರೆಯಾಗಿ ನಂತರ ಅವರು ಒತ್ತಡಕ್ಕೆ ಸಿಲುಕಬಹುದು ಎಂಬುದು ನಿಮಗೆ ಗೊತ್ತಾ? ಶಾಲಾ ಮಕ್ಕಳಲ್ಲಿ ಅತ್ಯಧಿಕ ಒತ್ತಡ ನೋಡಬಹುದು. ಯುನಿಸೆಫ್ ವರದಿಯ ಪ್ರಕಾರ, ಭಾರತದಲ್ಲಿ 15 ರಿಂದ 24 ವರ್ಷ ವಯಸ್ಸಿನ ಸುಮಾರು 14% ಮಕ್ಕಳು ಮತ್ತು ಯುವಕರು ಆಗಾಗ್ಗೆ ಖಿನ್ನತೆಗೆ ಒಳಗಾಗುತ್ತಾರೆ ಅಥವಾ ಕೆಲಸಗಳಲ್ಲಿ ಆಸಕ್ತಿ ಹೊಂದಿಲ್ಲ ಎಂದು ವರದಿ ಮಾಡಿದ್ದಾರೆ. ಇದರರ್ಥ ಪ್ರತಿ ಸಾವಿರಕ್ಕೆ ಸರಿಸುಮಾರು 140 ಮಕ್ಕಳು ಒತ್ತಡವನ್ನು ಅನುಭವಿಸುತ್ತಿದ್ದಾರೆ.
ಶಾಲಾ ಮಕ್ಕಳಲ್ಲಿ ಈ ರೀತಿ ಒತ್ತಡಕ್ಕೆ ಕಾರಣವೇನು?, ಯಾವ ರೀತಿ ಮಕ್ಕಳ ಒತ್ತಡ ನಿವಾರಣೆಗೆ ಪೋಷಕರು ಮುಂದಾಗಬೇಕು? ಹಾಗೆ ಮಕ್ಕಳು ಒತ್ತಡದಲ್ಲಿದ್ದಾರೆ ಅನ್ನೋದನ್ನು ನಾವು ತಿಳಿಯಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ಶಾಲಾ ಮಕ್ಕಳಲ್ಲಿ ಆತಂಕ ಇರುವುದು ಪತ್ತೆ ಮಾಡೋದು ಹೇಗೆ? ಶಾಲೆಗೆ ತೆರಳುವ ಎಲ್ಲಾ ಮಕ್ಕಳಲ್ಲೂ ಆತಂಕ ಹಾಗೂ ಒತ್ತಡ ಇರಲಿದೆ ಎಂಬ ನಿರ್ಣಯಕ್ಕೆ ಬರಲಾಗುವುದಿಲ್ಲ. ಬದಲಿಗೆ ಯಾರಲ್ಲಿ ಒತ್ತಡ ಇದೆ ಎಂಬುದನ್ನು ಪೋಷಕರು ಪತ್ತೆ ಮಾಡಬೇಕಾಗುತ್ತೆ. ಹಾಗಾದ್ರೆ ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಅವರು ಹೇಳಿರುವ ಕೆಲವೊಂದು ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ ನೋಡಿ.
ಒತ್ತಡ ಹೊಂದಿರುವ ಮಕ್ಕಳು ಆರಂಭಿಕ ಹಂತದಲ್ಲಿ ಶಾಲೆ ಕುರಿತು ದೂರು ಹೇಳುವುದು ಮಾಡುತ್ತಿರುತ್ತಾರೆ. ಹೆಚ್ಚಿನ ಮಕ್ಕಳು ಒತ್ತಡದಿಂದ ಪಾರಾಗುವ ಉದ್ದೇಶದಿಂದ ಶಾಲೆ ಅಥವಾ ಯಾರಾದರು ಒಬ್ಬರು ಶಿಕ್ಷಕರ ಕುರಿತು ಯಾವಾಗಲು ದೂರು ಹೇಳುವುದು ನೋಡಬಹುದು. ಹಾಗೆ ಶಾಲೆಗೆ ಹೊರಡುವ ಸಮಯದಲ್ಲಿ ಮರೆತಿರುವ ಕೆಲಸಗಳ ನೆನಪು ಮಾಡಿಕೊಳ್ಳುವುದು, ಶಾಲೆ ತಪ್ಪಿಸಲು ನೆಪ ಹೇಳುವುದು, ಅತೀಯಾದ ಕೋಪ, ನಡತೆಯಲ್ಲಿ ಬದಲಾವಣೆ ಆಗಿರುವುದನ್ನು ನಾವು ಗಮನಿಸಬಹುದು.
ಒತ್ತಡಕ್ಕೆ ಒಳಗಾಗುವ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವುದು, ಯಾರ ಜೊತೆಗೂ ಬೆರೆಯದೆ ಇರುವುದು, ಶಾಲೆಯಲ್ಲಿ ಸಹಪಾಠಿಗಳ ಜೊತೆಗೂ ಬೆರೆಯದೆ ಇರುವುದು, ಪೋಷಕರೊಂದಿಗೆ ಕೋಪ, ಶಾಲೆ ಕುರಿತಂತೆ ತಿರಸ್ಕೃತ ಭಾವನೆ ಹೊಂದಿರುತ್ತಾರೆ. ಇವೆಲ್ಲಾ ಆರಂಭಿಕ ಹಂತದ ಲಕ್ಷಣವನ್ನು ಅವರು ತೋರಿಸಬಹುದು. ಆದ್ರೆ ಅತಿಯಾದ ಒತ್ತಡದಲ್ಲಿರುವ ಮಕ್ಕಳ ನಡತೆಯಲ್ಲಿ ಬದಲಾವಣೆ ಗಮನಿಸಬಹುದು. ಮಕ್ಕಳ ಒತ್ತಡ ನಿವಾರಣೆಗೆ ಪೋಷಕರು ಏನು ಮಾಡಬೇಕು?
ಮಕ್ಕಳ ನಡತೆ ಮೇಲೆ ನಿಗಾ ಇಡುವುದು ಬಹಳ ಮುಖ್ಯವಾಗುತ್ತದೆ. ಹಾಗೆ ಶಾಲೆಯ ಸಮಯ ಹಾಗೂ ಮನೆಯಲ್ಲಿ ಅವರ ಅಭ್ಯಾಸಕ್ಕೆಂದು ಸಮಯವನ್ನು ಮೊದಲೇ ನಿಗದಿ ಮಾಡಿ. ಮಕ್ಕಳನ್ನು ಹೊಸ ಹೊಸ ಸ್ಥಳಗಳಿಗೆ ಕರೆದುಕೊಂಡು ಹೋಗುವುದು, ಹಾಗೆ ಓದು ಎಷ್ಟು ಮುಖ್ಯ ಅನ್ನೋದನ್ನು ಮನವರಿಕೆ ಮಾಡಿಕೊಡುವುದು, ಅವರಲ್ಲಿ ಹೊಸ ಹೊಸ ಅಭ್ಯಾಸ ಬೆಳೆಸಲು ಪ್ರೋತ್ಸಾಹಿಸುವುದು, ಮಕ್ಕಳನ್ನು ಹೆಚ್ಚು ಹೊತ್ತು ಹೊರಾಂಗಣ ಕ್ರೀಡೆಯಲ್ಲಿ ತೊಡಗುವಂತೆ ಮಾಡುವುದು, ಪರೀಕ್ಎ ಮತ್ತು ಓದು ಮುಂದಿನ ಭವಿಷ್ಯಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ನಿಧಾನವಾಗಿ ವಿವರಿಸಿ ಹೇಳುವುದು.
ಇನ್ನು ಮಕ್ಕಳು ಹೆಚ್ಚು ಒತ್ತಡಕ್ಕೆ ಒಳಗಾಗಿರುವುದು ನಿಮ್ಮ ಅರಿವಿಗೆ ಬಂದರೆ ಅಥವಾ ಅವರ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬುದು ನಿಮಗೆ ತಿಳಿದರೆ ಸೂಕ್ತ ಚಿಕಿತ್ಸೆಯ ಅಗತ್ಯವೂ ಇರಲಿದೆ. ಆಪ್ತ ಸಮಾಲೋಚನೆಯಂತಹ ಮನೋವೈಜ್ಞಾನಿಕ ಚಿಕಿತ್ಸೆ ಕೂಡ ಅಗತ್ಯವಿದ್ದಲ್ಲಿ ನೀಡಬಹುದು.




