ಬದಿಯಡ್ಕ: ಸಿಎಎಸ್‍ಆರ್ -ಫಂಡ್ ಉಪಯೋಗಿಸಿ ಅರ್ಧ ಬೆಲೆಗೆ ಸ್ಕೂಟರ್, ಲ್ಯಾಪ್ ಟಾಪ್, ಹೊಲಿಗೆ ಯಂತ್ರಗಳನ್ನು ನೀಡುವುದಾಗಿ ಭರವಸೆ ನೀಡಿ ಕುಂಬ್ಡಾಜೆಯ ಮೈತ್ರಿ ಗ್ರಂಥಾಲಯವು ಹಲವರಿಂದ 30ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕುಂಬ್ಡಾಜೆ ಬಿಜೆಪಿ ಪಂಚಾಯಿತಿ ಸಮಿತಿ ಆಗ್ರಹಿಸಿದೆ.
ಇದರಲ್ಲಿ ಶಾಮೀಲಾಗಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಳು ಹಾಕಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಬೇಕೆಂದು ಬಿಜೆಪಿ ಕುಂಬ್ಡಾಜೆ ಪಂಚಾಯತಿ ಅಧ್ಯಕ್ಷ ಹರೀಶ್ ಗೋಸಾಡ ತಿಳಿಸಿದ್ದಾರೆ.
ಅರ್ಧ ಬೆಲೆಗೆ ಸ್ಕೂಟರ್ ಮತ್ತು ಲ್ಯಾಪ್ ಟಾಪ್ ಭರವಸೆ;
ಕಾಸರಗೋಡಿನಲ್ಲೂ ದೂರು ದಾಖಲು: 30 ಲಕ್ಷ ರೂ. ವಂಚನೆ
ಕೇರಳದ ವಿವಿಧ ಸ್ಥಳಗಳಲ್ಲಿ ಸಿಎಸ್‍ಆರ್ -ಫಂಡ್ ಮೂಲಕ ಅರ್ಧ ಬೆಲೆಗೆ ಸ್ಕೂಟರ್, ಲ್ಯಾಪ್ ಟಾಪ್‍ಗಳನ್ನು ನೀಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಅನಂತುಕೃಷ್ಣನ್ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿಯೂ ದೂರು ದಾಖಲಾಗಿದೆ.
ಕುಂಬ್ಡಾಜೆ ಪಂಚಾಯಿತಿಯ ಮಾರ್ಪನಡ್ಕದಲ್ಲಿರುವ ಮೈತ್ರಿ ಗ್ರಂಥಾಲಯದ ಮೂಲಕ ಸ್ಕೂಟರ್, ಲ್ಯಾಪ್ ಟಾಪ್, ಟೈಲರಿಂಗ್ ಮೆಷಿನ್ ನೀಡುವುದಕ್ಕಾಗಿ ಸುಮಾರು 250ಕ್ಕಿಂತಲೂ ಅಧಿಕ ಮಂದಿಯಿಂದ ಹಣ ಪಡೆದು ವಂಚಿಸಿದ್ದಾರೆಂದು ದೂರು ದಾಖಲಾಗಿದೆ. ಈ ಮೂಲಕ ಸುಮಾರು 30 ಲಕ್ಷ ರೂಪಾಯಿ ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬದಿಯಡ್ಕ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಯಿ ಗ್ರಾಮ್ ಗ್ಲೋಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎನ್. ಆನಂತಕುಮಾರ್ ಮೂಲಕ ಅನಂತಕೃಷ್ಣನ್ ಅವರನ್ನು ಭೇಟಿಯಾಗಿ ಹಣ ಒಪ್ಪಂದ ಮಾಡಿಕೊಂಡೆವು ಎಂದು ಎಂದು ಗ್ರಂಥಾಲಯದ ಅಧಿಕೃತರು ತಿಳಿಸಿದ್ದಾರೆ. ಹಿಂದಿನ ಪಾವತಿಯಂತೆ 40 ಸ್ಕೂಟರ್‍ಗಳು, 75 ಲ್ಯಾಪ್‍ಟಾಪ್‍ಗಳು ಮತ್ತು 250 ಹೊಲಿಗೆ ಯಂತ್ರಗಳನ್ನು ಪಡೆದಿರುವುದಾಗಿ ಗ್ರಂಥಾಲಯದ ಅಧಿಕೃತರು ತಿಳಿಸಿದ್ದಾರೆ. ಆದರೆ ಇದಾದ ನಂತರ 36 ಸ್ಕೂಟರ್‍ಗಳು ಮತ್ತು 36 ಲ್ಯಾಪ್‍ಟಾಪ್‍ಗಳಿಗೆ ಹಣವನ್ನು ಪಾವತಿಸಲಾಗಿದೆ. ಆದರೆ ಇವುಗಳನ್ನು ಒದಗಿಸದೆ ವಂಚಿಸಲಾಗಿದೆ ಎಂಬುದು ದೂರು.
ಪ್ರಕರಣದಲ್ಲಿ ಸಾಯಿ ಗ್ರಾಮ್ ಗ್ಲೋಬಲ್ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ಆನಂತಕುಮಾರ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಿ ಮುಂದುವರಿಯಲು ಪೋಲೀಸರು ನಿರ್ಧರಿಸಿದ್ದಾರೆ. ಈ ಪ್ರಕರಣದಲ್ಲಿ ಎನ್‍ಜಿಒ ಒಕ್ಕೂಟದ ನಿರ್ದೇಶಕರನ್ನು ಸಹ ಪ್ರತಿವಾದಿಗಳನ್ನಾಗಿ ಹೆಸರಿಸಲಾಗುವುದು. ಪೋಲೀಸ್ ತನಿಖೆಯಲ್ಲಿ ಅನಂತುಕೃಷ್ಣನ್ ಅವರನ್ನು ಎನ್‍ಜಿಒ ಒಕ್ಕೂಟವು ಸ್ಕೂಟರ್‍ಗಳನ್ನು ವಿತರಿಸಲು ನಿಯೋಜಿಸಿತ್ತು ಎಂದು ತಿಳಿದುಬಂದಿದೆ. ತನಿಖೆಯ ಭಾಗವಾಗಿ ಪೋಲೀಸರು ಎನ್‍ಜಿಒ ಒಕ್ಕೂಟದ ಬೈಲಾಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಚ್ಚಿ ಅಪರಾಧ ಶಾಖೆಯ ಘಟಕವು ತನಿಖೆಯ ಉಸ್ತುವಾರಿಯನ್ನು ಹೊಂದಿದೆ. ಕೇರಳದಲ್ಲಿ ಹಲವಾರು ದೂರುಗಳು ಬಂದ ನಂತರ ಮತ್ತು 1,000 ಕೋಟಿ ರೂ.ಗಳಿಗೂ ಹೆಚ್ಚು ದುರುಪಯೋಗವಾಗಿರುವುದು ಪತ್ತೆಯಾದ ನಂತರ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

